ಉಡುಪಿ: ಕರಾಟೆ ಕಲಿಯಲು ತನ್ನ ತರಬೇತಿ ಕೇಂದ್ರಕ್ಕೆ ಬರುತ್ತಿದ್ದ 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕರಾಟೆ ತರಬೇತುದಾರ, ಹೆಜಮಾಡಿ ನಿವಾಸಿ ಉಮೇಶ್ ಬಂಗೇರ (48) ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ನಗರದ ತ್ವರಿತ ಪೋಕ್ಸೋ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀನಿವಾಸ್ ಸುವರ್ಣ ಅವರು ತೀರ್ಪು ಪ್ರಕಟಿಸಿದರು.
ಉಮೇಶ್ ಪಡುಬಿದ್ರಿಯಲ್ಲಿ ಕರಾಟೆ ತರಬೇತಿ ತರಗತಿಗಳನ್ನು ನಡೆಸುತ್ತಿದ್ದು, ಫೆಬ್ರವರಿ 12, 2020 ರಂದು, ತರಬೇತಿ ಅವಧಿಯ ನಂತರ 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ.
ಅಪರಾಧಿಯು ಫೆಬ್ರವರಿ 27 ರಂದು ಸಂತ್ರಸ್ತ ಬಾಲಕಿಯ ತಾಯಿಗೆ ಕರೆ ಮಾಡಿ ಮಗಳನ್ನು ಕರಾಟೆ ತರಗತಿಗಳಿಗೆ ಕಳುಹಿಸುವಂತೆ ಹೇಳಿದ್ದಾನೆ. ಅದರಂತೆ ತಾಯಿ ಮಗಳನ್ನು ತರಗತಿಗೆ ಹೋಗುವಂತೆ ಹೇಳಿದ್ದಾರೆ. ಆದರೆ ಮಗಳು ತರಗತಿಗೆ ಹೋಗುವ ವಿಚಾರ ಕೇಳಿ ಕಣ್ಣೀರಿಟ್ಟಿದ್ದಾಳೆ. ಆಕೆಯನ್ನು ವಿಚಾರಿಸಿದಾಗ, ಲೈಂಗಿಕ ಕಿರುಕುಳದ ಬಗ್ಗೆ ತಿಳಿದುಬಂದಿದೆ. ಅಘಾತಗೊಂಡ ತಾಯಿ, ಕರಾಟೆ ತರಬೇತುದಾರನ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅಂದಿನ ಕಾಪು ಸಿಐ ಮಹೇಶ್ ಪ್ರಸಾದ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪಿಗೆ ಪೋಕ್ಸೋ ಕಾಯ್ದೆಯಡಿ 10 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ಹಾಗೂ ಜೀವ ಬೆದರಿಕೆಯಡಿ 2000 ರೂ. ದಂಡ ವಿಧಿಸಲಾಗಿದೆ. ಸಂತ್ರಸ್ತ ಬಾಲಕಿಗೆ 17,000 ರೂಪಾಯಿ ಮತ್ತು ಸರ್ಕಾರಕ್ಕೆ 5,000 ರೂಪಾಯಿ ಪಾವತಿಸುವಂತೆ ನ್ಯಾಯಾಲಯವು ಅಪರಾಧಿಗೆ ಆದೇಶಿಸಿದೆ. ಅಲ್ಲದೆ, ಸಂತ್ರಸ್ತ ಬಾಲಕಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವೈ ಟಿ ರಾಘವೇಂದ್ರ ವಾದ ಮಂಡಿಸಿದ್ದಾರೆ.