ಕಳೆದ ಕೆಲವು ಸಮಯದಿಂದ “ಕರಾವಳಿ ” ಎನ್ನುವ ಸಿನಿಮಾ ಸದ್ದು ಮಾಡ್ತಿದೆ. ಇನ್ನೂ ರಿಲೀಸ್ ಆಗಿರದ ಈ ಸಿನಿಮಾ ಪೋಸ್ಟರ್ ಮತ್ತು ಫಸ್ಟ್ ಲುಕ್ ಮೂಲಕ ಸದ್ದು ಮಾಡುತ್ತಿದೆ. ಈ ಸದ್ದಿಗೆ ಕಾರಣ ಈ ಸಿನಿಮಾ “ಕರಾವಳಿ”ಯ ಜನಪದ ಕ್ರೀಡೆಯಾದ ಕಂಬಳದ ಕತೆಯನ್ನೊಳಗೊಂಡ ಚಿತ್ರವಾಗಿರೋದು.
ಈಗ “ಕರಾವಳಿ” ಚಿತ್ರದ ಟೀಸರ್ ಎಲ್ಲೆಲ್ಲೂ ಅಬ್ಬರಿಸುತ್ತಿದ್ದು ಟೀಸರ್ ನೋಡಿದ ಪ್ರೇಕ್ಷಕರು ಖುಷಿಯಿಂದ ದಂಗಾಗಿದ್ದಾರೆ. ನಟ ಪ್ರಜ್ವಲ್ ದೇವರಾಜ್ (Prajwal Devaraj) ನಟಿಸಿ ಗುರುದತ್ ಗಾಣಿಗ Gurudath Ganiga ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಟೀಸರ್ ನಲ್ಲಿ ಮತ್ತೊಬ್ಬ ಪವರ್ಫುಲ್ ನಟ ರಾಜ್ ಬಿ ಶೆಟ್ಟಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ಟೀಸರ್ ನಲ್ಲಿ ರಾಜ್ ಬಿ ಶೆಟ್ಟಿ ಅವರ ತಲೆಯಲ್ಲಿ ಕೂದಲಿದೆ. ಅವರ ಎಂದಿನ ಬೊಕ್ಕ ತಲೆ ಇಲ್ಲಿಲ್ಲ . ಜೊತೆಗೆ ಅವರು ಕಂಬಳದ ಕೋಣಗಳನ್ನು ಹಿಡಿದುಕೊಂಡು, ಹೋಗುವ ದೃಶ್ಯ ಕರಾವಳಿಗರ ಸೆಂಟಿಮೆಂಟ್ ಗೆ ಹತ್ತಿರವಾಗಿದೆ. ಈ ಕಾರಣಕ್ಕಾಗಿ ಅವರ ಅಭಿಮಾನಿಗಳು ಥ್ರಿಲ್ಲ್ ಆಗಿದ್ದಾರೆ.
ಟೀಸರ್ನ ಹಿನ್ನೆಲೆ ಸಂಗೀತ ಎಲ್ಲರ ಕಿವಿಯೊಳಗೆ ಮೊಳಗುವಂತಿದ್ದು, “ಸಾಯುವ ಮೊದಲು ರಥಬೀದಿಯಲ್ಲಿ ಕಂಬಳದ ಕೋಣಗಳ ಮೆರವಣಿಗೆ ಮಾಡಬೇಕು” ಎನ್ನುವ ಒಂದು ಡೈಲಾಗ್ ಇಡೀ ಟೀಸರ್ ಗೆ ರೋಚಕ ಟ್ವಿಸ್ಟ್ ಕೊಡುವಂತಿದೆ. ತುಳುನಾಡಿಗರ ನಾಡಿಮಿಡಿತನ್ನು ರೋಮಾಂಚನಗೊಳಿಸುವಂತಿದೆ. ಅಂತೂ ಇಂತೂ “ಕರಾವಳಿ” ಚಿತ್ರ ರಿಲೀಸ್ ಗೂ ಮೊದಲೇ ಕಂಬಳ ಪ್ರೇಮಿಗಳನ್ನೂ ಸೆಳೆದಿದೆ. ರಿಲೀಸ್ ಆದ ಮೇಲೆ ಯಾವ ರೀತಿ ಕಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.












