ಕಾಪು: ಪಿಲಿ ಕೋಲ ಸಂಪನ್ನ

ಕಾಪು: ತುಳುನಾಡಿನ ಸಪ್ತ ಜಾತ್ರೆಗಳಲ್ಲಿ ಒಂದಾಗಿರುವ ಕಾಪು ಶ್ರೀ ಬ್ರಹ್ಮ ಮುಗ್ಗೇರ್ಕಳ-ಪಿಲಿಚಂಡಿ ದೈವಸ್ಥಾನದಲ್ಲಿ ದ್ವೈ ವಾರ್ಷಿಕವಾಗಿ ನಡೆಯುವ ಪಿಲಿ ಕೋಲವು ವಿಶೇಷ ಜನಾಕರ್ಷಣೆಯೊಂದಿಗೆ ಮೇ 4ರಂದು ಸಂಪನ್ನಗೊಂಡಿತು.

2 ಗಂಟೆಯ ಬಣ್ಣಗಾರಿಕೆಯ ಬಳಿಕ ಅಬ್ಬರದೊಂದಿಗೆ ಪಂಜರದೊಳಗಿಂದ ಹೊರಗೆ ಬಂದ ಪಿಲಿಚಂಡಿ ದೈವವು ಬ್ರಹ್ಮರ ಗುಂಡಕ್ಕೆ ಮೂರು ಸುತ್ತು ಬಂದು, ಮಾರಿಯಮ್ಮ ಗುಡಿಯ ಮುಂಭಾಗದಲ್ಲಿ ನೆಡಲಾಗಿದ್ದ ಬಂಟ ಕಂಬವನ್ನೇರಿ ಜೀವಂತ ಕೋಳಿಯನ್ನು ಬಲಿಯಾಗಿ ಸ್ವೀಕರಿಸಿ ಮುಂದೆ ಗ್ರಾಮ ಭೇಟಿಗೆ ತೆರಳುವುದು ಸಂಪ್ರದಾಯವಾಗಿದೆ.

ಈ ಬಾರಿಯ ನಗರ ಪ್ರದಕ್ಷಿಣೆ ಮತ್ತು ಗ್ರಾಮ ಸಂಚಾರದ ವೇಳೆ ಪಿಲಿ ಭೂತವು ಓರ್ವನನ್ನು ಸ್ಪರ್ಶಿಸಿದ್ದು, ಬಳಿಕ ದೈವಸ್ಥಾನಕ್ಕೆ ಓಡಿ ಬಂದು ಪೂರ್ವ ಸಂಪ್ರದಾಯದ ಪದ್ಧತಿಗಳನ್ನು ನೆರವೇರಿಸಲಾಯಿತು.

ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಮತ್ತು ಮುಂಬಯಿ ಸೇರಿದಂತೆ ದೇಶ-ವಿದೇಶಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ಮತ್ತು ಜಾನಪದಾಸಕ್ತರು ಬಂದಿದ್ದು ಪಿಲಿ ಕೋಲವನ್ನು ಕಣ್ತುಂಬಿಕೊಂಡರು.