ಕಾಪು ಪುರಸಭೆ ಚುನಾವಣೆ: ಮದ್ಯ ಮಾರಾಟ, ಸಂತೆ, ಜಾತ್ರೆ ನಿಷೇಧ

ಉಡುಪಿ: ಕಾಪು ಪುರಸಭಾ ಚುನಾವಣೆಗೆ ಸಂಬಂಧಿಸಿದಂತೆ ಪುರಸಭಾ ವ್ಯಾಪ್ತಿಯಲ್ಲಿ ಡಿಸೆಂಬರ್ 27 ರಂದು ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆ ಮತ್ತು ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಾಗೂ ಚುನಾವಣಾ ಕಾರ್ಯಗಳು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಶಾಂತಿಯುತ ವಾತಾವರಣದಲ್ಲಿ ನಡೆಸಲು ಅನುಕೂಲವಾಗುವಂತೆ ರಾಜ್ಯ ಅಬಕಾರಿ ಕಾಯ್ದೆ ಅನ್ವಯ ಡಿ. 25 ರ ಸಂಜೆ 5 ಗಂಟೆಯಿಂದ ಡಿ. 27 ರ ಸಂಜೆ 5 ರ ವರೆಗೆ ಎಲ್ಲಾ ರೀತಿಯ ಮದ್ಯದಂಗಡಿ, ಮದ್ಯ ಮಾರಾಟ ಡಿಪೋ, ಮದ್ಯ ತಯಾರಿಕಾ ಡಿಸ್ಟಿಲರಿ, ಸ್ಟಾರ್ ಹೋಟೆಲ್, ಶೇಂದಿ ಅಂಗಡಿಗಳನ್ನು ಮುಚ್ಚುವಂತೆ ಹಾಗೂ ಹೋಟೆಲ್, ಕ್ಲಬ್‌ಗಳಲ್ಲಿ ಮದ್ಯ ಮಾರಾಟ ಹಾಗೂ ಸರಬರಾಜು ಮಾಡುವುದನ್ನು ನಿಷೇಧಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೂರ್ಮಾರಾವ್ ಎಂ. ಆದೇಶಿಸಿದ್ದಾರೆ.

ಸಂತೆ, ಜಾತ್ರೆ ನಿಷೇಧ:
ಕಾಪು ಪುರಸಭಾ ವ್ಯಾಪ್ತಿಯಲ್ಲಿ ಚುನಾವಣಾ ದಿನದಂದು ನಡೆಯುವ ಸಂತೆ ಮತ್ತು ಎಲ್ಲಾ ತರಹದ ಜಾತ್ರೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.