ಕಾಪು; ಮನೆಗೊಂದರಂತೆ ಉದ್ಯೋಗ ಒದಗಿಸಿಕೊಡುವ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಚಾಲನೆ: ಸೊರಕೆ

ಕಾಪು : ಸಣ್ಣ ಕೈಗಾರಿಕೆಗೆ ಒತ್ತು ಕೊಟ್ಟು ಮನೆಗೊಬ್ಬರಿಗೆ ಉದ್ಯೋಗ ನೀಡುವ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಶಾಸಕನಾದ ಕೂಡಲೇ ಚಾಲನೆ ನೀಡಲಾಗುವುದು ಎಂದು ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯ್‌ ಕುಮಾರ್‌ ಸೊರಕೆ ಹೇಳಿದ್ದಾರೆ.

ಮಣಿಪಾಲ ಟೆಕ್ನಾಲಜಿ ಸಮೂಹ ಸಂಸ್ಥೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಅವರು ಕಾರ್ಮಿಕರೇ ಈ ದೇಶದ ನಿಜವಾದ ಸಂಪತ್ತು. ಮಣಿಪಾಲ ಗ್ರೂಫ್ಸ್ ತಾಂತ್ರಿಕ ಸಂಸ್ಥೆಗಳು ದೇಶ ಮಾತ್ರವಲ್ಲದೇ ಪ್ರಪಂಚದಾದ್ಯಂತ ಸುದ್ಧಿಯಲ್ಲಿವೆ. ಗ್ರಾಮೀಣ ಭಾಗದ ಸಾವಿರಾರು ಮಂದಿಗೆ ಉದ್ಯೋಗ ನೀಡುವ ಮಹತ್ಕಾರ್ಯ ಮಣಿಪಾಲ ಸಮೂಹ ಸಂಸ್ಥೆಯ ಮೂಲಕ ನಡೆಯುತ್ತಿದ್ದು ಮಣಿಪಾಲ ಸಮೂಹ ಸಂಸ್ಥೆಯ ಮಾದರಿಯಲ್ಲೇ ಸಣ್ಣ ಕೈಗಾರಿಕೆಯನ್ನು ಹುಟ್ಟು ಹಾಕಿ ಮನೆಗೊಂದರಂತೆ ಉದ್ಯೋಗ ನೀಡುವ ಬೃಹತ್‌ ಉದ್ದಿಮೆಗಳನ್ನು ಆರಂಭಿಸುವ ಮಹದಾಸೆ ತನಗಿದೆ ಎಂದರು.

ಮಣಿಪಾಲ ಸಮೂಹ ಸಂಸ್ಥೆಯ ಯುನಿಟ್‌ 4ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಶ್ರೀನಿವಾಸ್‌, ನಿರ್ವಹಣಾ ವಿಭಾಗದ ವ್ಯವಸ್ಥಾಪಕ ಸತೀಶ್‌ ಪ್ರಭು, ಕಾಂಗ್ರೆಸ್‌ ಮುಖಂಡರಾದ ಸಂತೋಷ್‌ ಕುಮಾರ್‌ ಅಲೆವೂರು, ದೇವು ಪೂಜಾರಿ, ಸುಶಾಂತ್‌, ಸಂದೇಶ್‌, ಪ್ರಕಾಶ್‌, ಯತೀಶ್‌ ಕುಮಾರ್‌, ಜಲ್ಲೇಶ್‌ ಶೆಟ್ಟಿ ಉಪಸ್ಥಿತರಿದ್ದರು.

ಬಡವರ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ 
ಕಟಪಾಡಿ, ಮೇ 5 : ಈ ಬಾರಿಯ ಚುನಾವಣೆ ಬಡವರ ಭವಿಷ್ಯವನ್ನು ನಿರ್ಧರಿಸುವ ಚುನಾವಣೆಯಾಗಿದೆ. ಬಡವರು ಮತ್ತು ಮಧ್ಯಮ ವರ್ಗದವರು ಈ ಚುನಾವಣೆಯಲ್ಲಿ ಸೋಲಬಾರದು ಎನ್ನುವುದು ನನ್ನ ಮಹದಾಸೆಯಾಗಿದೆ ಎಂದು ಕಾಪು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯ್‌ ಕುಮಾರ್‌ ಸೊರಕೆ ಹೇಳಿದ್ದಾರೆ.

ಕಟಪಾಡಿ ಸರಕಾರಿಗುಡ್ಡೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸರಕಾರ ಬಡವರ ಜನಸಾಮಾನ್ಯರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ಎಲ್ಲಾ ಯೋಜನೆಗಳನ್ನು ಹಿಂತೆಗೆದುಕೊಳ್ಳಲಾಗಿದೆ. ಈ ಮೂಲಕ ಬಡವರು ಮತ್ತು ಜನಸಾಮಾನ್ಯರನ್ನು ಕಷ್ಟಕ್ಕೆ ದೂಡುವ ಕೆಲಸವನ್ನು ಬಿಜೆಪಿ ಸರಕಾರ ಮಾಡುತ್ತಿದೆ. ಇದು ನಮ್ಮೆಲ್ಲರ ದೌರ್ಭಾಗ್ಯವಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ದ್ವೇಷ, ಅಸೂಯೆಯಿಲ್ಲದೇ ಸಮಾಜ ನಿರ್ಮಾಣವೇ ನಮ್ಮ ಉದ್ದೇಶವಾಗಿದೆ. ಹಣ, ಉಡುಗೊರೆ ರೂಪದ ಆಮಿಷವೊಡ್ಡಿ ನಿಮ್ಮ ಮತ ಸೆಳೆಯಲು, ಮತವನ್ನು ಖರೀದಿಸಲು ಬರುವ ಸಾಧ್ಯತೆಗಳಿವೆ. ಈ ಬಗ್ಗೆ ಮತದಾರರು ಜಾಗರೂಕರಾಗಿರಬೇಕು. ನಿಮ್ಮ ಮತವನ್ನು ಮಾರಿಕೊಳ್ಳದೇ ನಿಮ್ಮ ಕಷ್ಟದಲ್ಲಿ ಭಾಗಿಯಾಗಿ ಸಮಸ್ಯೆಗೆ ಪರಿಹಾರ ಒದಗಿಸುವ ಪ್ರಾಮಾಣಿಕರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಪಕ್ಷದ ಮುಖಂಡರಾದ ಸರಸು ಡಿ. ಬಂಗೇರ, ಶ್ರೀಕರ ಅಂಚನ್‌, ವಿನಯ ಬಲ್ಲಾಳ್‌, ಪ್ರಭಾಕರ ಆಚಾರ್ಯ, ಆಶಾ ಅಂಚನ್‌, ಅಬೂಬಕ್ಕರ್‌ ಎ.ಆರ್‌. ಉಪಸ್ಥಿತರಿದ್ದರು.

ಕಾಪು ಕ್ಷೇತ್ರಕ್ಕೆ ಐಡೆಂಟಿಟಿ ಕೊಡಿಸಿದ್ದಕ್ಕೆ ಹೆಮ್ಮೆಯಿದೆ
2013ರವರೆಗೆ ಕಾಪು ಕ್ಷೇತ್ರಕ್ಕೆ ಯಾವುದೇ ಐಡೆಂಟಿಟಿ ಇರಲಿಲ್ಲ. ಕಾಪು ತಾಲೂಕು, ಪುರಸಭೆ ರಚನೆಯ ಮೂಲಕವಾಗಿ ಎಲ್ಲಾ ಸೌಕರ್ಯವನ್ನು ಒದಗಿಸಿ ಕೊಟ್ಟಿದ್ದೇವೆ. ತಾಲೂಕು ಕೇಂದ್ರದಿಂದ ಎಲ್ಲಾ ಗ್ರಾಮಗಳಿಗೂ ನೇರ ಸಂಪರ್ಕ ಕಲ್ಪಿಸುವ ಯೋಜನೆ ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ. ಇಂಜಿನಿಯರಿಂಗ್‌, ಮೆಡಿಕಲ್‌ ಕಾಲೇಜು ಸ್ಥಾಪನೆ ಸಹಿತ ಶೆ„ಕ್ಷಣಿಕವಾಗಿ ಕಾಪು ಕ್ಷೇತ್ರವು ಸ್ವಂತ ಕಾಲಿನ ಮೇಲೆ ನಿಲ್ಲುವ ಯೋಜನೆಯನ್ನು ರೂಪಿಸಬೇಕಾಗಿದೆ ಎಂದರು.

ಸೊರಕೆ ವ್ಯಕಿತ್ವಕ್ಕೆ ಯುವತಿ ಫಿದಾ ಆದ ಯುವತಿಯಿಂದ ಭಾವಚಿತ್ರ ಗಿಫ್ಟ್‌
ಕಾಂಗ್ರೆಸ್‌ ಅಭ್ಯರ್ಥಿ ವಿನಯ್‌ ಕುಮಾರ್‌ ಸೊರಕೆಯವರ ವ್ಯಕ್ತಿತ್ವಕ್ಕೆ ಯುವ ಸಮುದಾಯ ಮನಸೋಲುತ್ತಿದ್ದು ಪೆರ್ಡೂರಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಸಿದ್ಧಾಪುರದ ಯುವಕನೊಬ್ಬ ಸೊರಕೆಯವರಿಗೆ ಪೆನ್ಸಿಲ್‌ ಆರ್ಟ್‌ವೊಂದನ್ನು ಗಿಫ್ಟ್‌ ನೀಡಿದ್ದನು. ಇದೀಗ ಕಟಪಾಡಿ ಸರಕಾರಿ ಗುಡ್ಡೆಯಲ್ಲಿ ರಮ್ಜಿನ್ ಎಂಬಾಕೆ ಸೊರಕೆಯವರ ಜಾತ್ಯಾತೀತ ಆಡಳಿತ ಮತ್ತು ಪ್ರಾಮಾಣಿಕತೆಗೆ ಮನಸೋತು ಭಾವಚಿತ್ರದ ಆರ್ಟ್‌ನ್ನು ಗಿಫ್ಟ್‌ ನೀಡಿ ಬೆಂಬಲ ಸೂಚಿಸಿದ್ದಾರೆ.