ಕಂಬಳದಲ್ಲಿ ಅಪರೂಪದ ಐತಿಹಾಸಿಕ ಸ್ಪರ್ಧೆ: ಸೆಮಿಫೈನಲ್‌ನಲ್ಲಿ ಮೂರು ಬಾರೀ ಸಮಾ-ಸಮಾ

ಕಾರ್ಕಳ: ಕಾರ್ಕಳದ ಬಾರಾಡಿ ಬೀಡು ಸೂರ್ಯ ಚಂದ್ರ ಜೋಡುಕರೆ ಕಂಬಳ ಡಿಸೆಂಬರ್ 14 ಮತ್ತು 15ರಂದು ನಡೆದಿದ್ದು, ಈ ಜೋಡುಕರೆ ಕಂಬಳ ಅಪರೂಪದ ಐತಿಹಾಸಿಕ ಸ್ಪರ್ಧೆಯೊಂದಕ್ಕೆ ಸಾಕ್ಷಿಯಾಗಿದೆ.
ಸುಮಾರು 156 ಜೋಡಿ ಕೋಣಗಳು ಭಾಗವಹಿಸಿದ್ದ, ಕಂಬಳದಲ್ಲಿ ಆರು ವಿಭಾಗದಲ್ಲಿ ಸ್ಪರ್ಧೆ ನಡೆದಿತ್ತು. ಎಲ್ಲ ವಿಭಾಗಗಳು ಮಾಮೂಲಿಯಂತೆ ನಡೆದರೆ ಅಡ್ಡ ಹಲಗೆ ವಿಭಾಗದಲ್ಲಿ ಕೋಣಗಳ ಓಟದ ಜಿದ್ದು ಐತಿಹಾಸಿಕ ದಾಖಲೆ ನಿರ್ಮಾಣವಾಯಿತು.
ಅಡ್ಡಹಲಗೆ ವಿಭಾಗದಲ್ಲಿ ಸ್ಪರ್ಧಿಸಿದ್ದ ಹಂಕರ್ಜಾಲ್ ದಿ. ಭಿರ್ಮಣ್ಣ ಶೆಟ್ಟಿ  ಮತ್ತು ಬೋಳಾರ ತ್ರಿಶಾಲ್ ಪೂಜಾರಿಯವರ ಕೋಣಗಳು ಸೆಮಿ ಫೈನಲ್ ಸುತ್ತಿನಲ್ಲಿ ಈ ಐತಿಹಾಸಿಕ ಸ್ಪರ್ಧೆ ನಿರ್ಮಿಸಿದವು.
ಸೆಮಿ ಫೈನಲ್ ನಿಂದ ಫೈನಲ್ ಗೆ ಲಗ್ಗೆ ಇಡಬೇಕಾದರೆ ಬರೊಬ್ಬರಿ ನಾಲ್ಕನೇ ಬಾರೀ ಓಟ ನಡೆಯಬೇಕಾಯಿತು. ಮೊದಲ ಬಾರೀ, ಎರಡನೇ ಬಾರಿ, ಮೂರನೇ ಬಾರಿಯೂ ಕೂಡ ಈ ಎರಡು ‌ಜತೆ ಕೋಣಗಳು ಜಿದ್ದಾಜಿದ್ದಿನಿಂದ ಸರಿಸಮವಾಗಿ ಓಡಿದ್ದು, ಯಾವುದೇ ಫಲಿತಾಂಶ ನೀಡಲಾಗಿಲ್ಲ.
ಅಂತಿಮವಾಗಿ ಕಂಬಳದ ಪದ್ದತಿಯಂತೆ ನಾಲ್ಕನೇ ಬಾರಿಗೆ ಕರೆಗಳನ್ನು ಬದಲಾಯಿಸಿ ಮೊದಲ ಮೂರು ಓಟದಲ್ಲಿ ಸೂರ್ಯ ಕರೆಯಲ್ಲಿ ಓಡಿದ್ದ ಹಂಕರ್ಜಾಲು ಚಂದ್ರ ಕರೆಯಲ್ಲೂ, ಚಂದ್ರ ಕರೆಯಲ್ಲಿ ಓಡಿದ ಬೋಳಾರ ಸೂರ್ಯ ಕರೆಯಲ್ಲಿ ಓಡಿಸಲು ಅವಕಾಶ ನೀಡಲಾಯಿತು.
ಈ‌ ಮಧ್ಯೆ ನಾಲ್ಕನೇ ಬಾರಿಯೂ ಸಮಬಲವಾಗಿ ತೀರ್ಪು ಬಂದರೆ ಇಬ್ಬರನ್ನೂ ದ್ವಿತೀಯ ಸ್ಥಾನ ಘೋಷಿಸುವ ನಿರ್ಧಾರಕ್ಕೆ ಬರಲಾಗಿತ್ತು.
ಆದರೆ ನಾಲ್ಕನೇ ಬಾರಿಗೆ ಓಡಿದಾಗ ಕೇವಲ ಒಂದಿಷ್ಟು ಅಂತರದಲ್ಲಿ ಸೂರ್ಯ ಕರೆಯ ಬೋಳಾರ ತ್ರಿಶಾಲ್ ಪೂಜಾರಿಯವರ ಕೋಣಗಳು ವಿಜೇತರಾಗಿ ಫೈನಲ್‌ ತಲುಪಿತ್ತು.
ಅಡ್ಡ ಹಲಗೆ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಇಂಥ ಅಪರೂಪದ ಸ್ಪರ್ಧೆ ನಡೆದಿದ್ದು, ಹಗ್ಗ ಹಿರಿಯ ವಿಭಾಗದಲ್ಲಿ‌ ಈ ಹಿಂದೆ ನಡೆದಿತ್ತು ಎನ್ನಲಾಗುತ್ತಿದೆ.