ಕಾಂತಾರ ವರಾಹರೂಪಂ ಹಾಡಿಗೆ ಕಂಟಕ: ಕೃತಿಚೌರ್ಯದ ಆಧಾರದ ಮೇಲೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ ಕೇರಳ ಹೈಕೋರ್ಟ್

ತಿರುವನಂತಪುರಂ: ವಿಶ್ವದಾದ್ಯಂತ ಸಂಚಲನ ಮೂಡಿಸಿದ ಕಾಂತಾರ ಚಿತ್ರಕ್ಕೆ ಕಂಟಕವೊಂದು ಎದುರಾಗಿದೆ. ಬೆಳಗ್ಗಿನ ಸುಪ್ರಭಾತದಂತೆ ಕಾಂತಾರ ಚಿತ್ರದ ಪಂಜುರ್ಲಿ ದೈವದ ‘ವರಾಹ ರೂಪಂ’ ಹಾಡು ಮನಸೂರೆಗೊಳಿಸುವಂತಿದ್ದು, ನಿತ್ಯವೂ ಎಲ್ಲರ ಮನೆಯಲ್ಲೂ ಕೇಳಿಸುತ್ತಿದೆ. ಇದೀಗ ಚಿತ್ರತಂಡವು ಈ ಹಾಡನ್ನು ಬಳಸದಂತೆ ಕೇರಳದ ನ್ಯಾಯಾಲಯವು ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

ಕೇರಳ ಮೂಲದ ರಾಕ್ ಮ್ಯೂಸಿಕ್ ಬ್ಯಾಂಡ್ ‘ತೈಕ್ಕುಡಮ್ ಬ್ರಿಡ್ಜ್’ ಸಲ್ಲಿಸಿದ ಮೊಕದ್ದಮೆಯಲ್ಲಿ ಕೋಝಿಕ್ಕೋಡ್‌ನ ಪ್ರಧಾನ ಜಿಲ್ಲಾ ನ್ಯಾಯಾಲಯವು ಮಧ್ಯಂತರ ಆದೇಶವನ್ನು ನೀಡಿದೆ. ವರಾಹ ರೂಪಂ ಅನ್ನು ತೈಕ್ಕುಡಮ್ ಬ್ರಿಡ್ಜ್ ಬ್ಯಾಂಡ್ ನ ‘ನವರಸಂ’ ಹಾಡಿನಿಂದ ಕೃತಿಚೌರ್ಯ ಮಾಡಲಾಗಿದೆ ಎಂದು ಈ ತಂಡ ಆರೋಪಿಸಿದೆ.

ಅರ್ಜಿಯ ಬಗ್ಗೆ ನ್ಯಾಯಾಲಯವು ಪ್ರಾಥಮಿಕವಾಗಿ ತೃಪ್ತಿ ಹೊಂದಿದ ನಂತರ ಈ ಆದೇಶವನ್ನು ನೀಡಿದೆ ಎಂದು ತೈಕ್ಕುಡಂ ಬ್ರಿಡ್ಜ್ ಪರವಾಗಿ ಹಾಜರಾದ ವಕೀಲ ಸತೀಶ್ ಮೂರ್ತಿ ಲೈವ್ ಲಾ ಗೆ ತಿಳಿಸಿದ್ದಾರೆ. ಹೊಂಬಾಳೆ ಫಿಲಂಸ್, ರಿಷಬ್ ಶೆಟ್ಟಿ, ಕೇರಳದ ವಿತರಕರಾದ ಪೃಥ್ವಿರಾಜ್ ಪ್ರೊಡಕ್ಷನ್ಸ್ ವಿರುದ್ಧ ತಡೆಯಾಜ್ಞೆ ನೀಡಲಾಗಿದೆ.

ಇದಲ್ಲದೆ, ಅಮೆಜಾನ್ ಮ್ಯೂಸಿಕ್, ಸ್ಪಾಟಿಫೈ, ವಿಂಕ್ ಮ್ಯೂಸಿಕ್, ಜಿಯೋಸಾವನ್ ನಂತಹ ಸಂಗೀತ ವೇದಿಕೆಗಳಲ್ಲಿಯೂ ಸಹ ಹಾಡನ್ನು ಹಾಕದಂತೆ ನಿರ್ಬಂಧಿಸಲಾಗಿದೆ. ಜೊತೆಗೆ ಯೂಟ್ಯೂಬ್‌ನಲ್ಲಿ ಹಾಡನ್ನು ತೆಗೆದುಹಾಕಲು ಹಕ್ಕುಸ್ವಾಮ್ಯ ನೋಟಿಸ್‌ಗಳನ್ನು ನೀಡಲಾಗುವುದು ಎಂದು ವಕೀಲರು ತಿಳಿಸಿದ್ದಾರೆ.

ಕಾಂತಾರ ಸಂಗೀತ ನಿರ್ದೇಶಕ ಶ್ರೀ ಅಜನೀಶ್ ಲೋಕನಾಥ್ ಅವರು “ನವರಸಂ” ಗೀತೆಯಿಂದ ಸ್ಫೂರ್ತಿ ಪಡೆದಿರುವುದಾಗಿ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ ಎಂದು ಮೂರ್ತಿ ಹೇಳಿದ್ದಾರೆ.

ಎರಡೂ ಹಾಡುಗಳ ನಡುವಿನ ಸಾಮ್ಯತೆಗಳು ಪ್ರಾಸಂಗಿಕ ಅಥವಾ ಮೇಲ್ನೋಟಕ್ಕೆ ಸಂಬಂಧಿಸಿಲ್ಲ ಆದರೆ ಗಣನೀಯವಾಗಿವೆ ಮತ್ತು ಆದ್ದರಿಂದ ಇದು ಜಾಗೃತ ಕೃತಿಚೌರ್ಯದ ಪ್ರಕರಣವಾಗಿದ್ದು, ಹಕ್ಕುಸ್ವಾಮ್ಯ ಕಾಯಿದೆ 1957 ರ ಅಡಿಯಲ್ಲಿ ಖಾತರಿಪಡಿಸಲಾದ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಫಿರ್ಯಾದಿ ವಾದಿಸಿದ್ದಾರೆ.

ತಡೆಯಾಜ್ಞೆಗೂ ಮುನ್ನ ವರಾಹ ರೂಪಂ ಹಾಡನ್ನು ಹಾಡಿರುವ ಸಾಯಿ ಗಣೇಶ್ ಕೃತಿಚೌರ್ಯ ಆರೋಪದ ಬಗ್ಗೆ ಅಭಿಪ್ರಾಯ ವಕ್ತಪಡಿಸಿದ್ದು, ನನ್ನ ಅಭಿಪ್ರಾಯದಲ್ಲಿ, ಎರಡೂ ಟ್ರ್ಯಾಕ್‌ಗಳ ಮನಸ್ಥಿತಿ ವಿಭಿನ್ನವಾಗಿದೆ. ‘ನವರಸಂ’ ಒಂಬತ್ತು ಭಾವಗಳನ್ನು ಚಿತ್ರಿಸುತ್ತದೆ, ಆದರೆ ‘ವರಾಹ ರೂಪಂ’ ಭೂತ ಕೋಲ ಸಂಸ್ಕೃತಿ ಮತ್ತು ದೈವತ್ವದ ಬಗ್ಗೆ ಹೆಚ್ಚು ಕೇಂದ್ರೀಕರಿಸುತ್ತದೆ . ‘ವರಾಹ ರೂಪಂ’ ರಾಗಗಳು ಕೂಡ ‘ನವರಸಂ’ ಅನ್ನು ಆಧರಿಸಿಲ್ಲ ಎಂದಿದ್ದಾರೆ.

‘ವರಾಹ ರೂಪಂ’ ಪ್ರಧಾನವಾಗಿ ತೋಡಿ, ಮುಖಾರಿ ಮತ್ತು ಕನಕಾಂಗಿ ರಾಗಗಳನ್ನು ಆಧರಿಸಿದೆ ಎಂದು ಸಾಯಿ ವಿಘ್ನೇಶ್ ಹೇಳುತ್ತಾರೆ. “ಕರ್ನಾಟಿಕ್ ಸಂಯೋಜನೆಗಳಲ್ಲಿ, ಒಬ್ಬ ಗಾಯಕ ಮುಂದಿನ ರಾಗಕ್ಕೆ ಹೋಗುವ ಮೊದಲು ಸಾಂಪ್ರದಾಯಿಕವಾಗಿ ಅದೇ ರಾಗದಲ್ಲಿ ಕನಿಷ್ಠ ಎರಡರಿಂದ ನಾಲ್ಕು ಸಾಲುಗಳನ್ನು ಹಾಡುತ್ತಾನೆ, ಆದರೆ ಇಲ್ಲಿ ಪ್ರತಿಯೊಂದು ಸಾಲುಗಳನ್ನು ಬೇರೆ ಬೇರೆ ರಾಗದಲ್ಲಿ ಹಾಡಲಾಗುತ್ತದೆ. ಅಜನೀಶ್ ಮತ್ತು ನಾನು ತುಂಬಾ ವಿಭಿನ್ನ ಸಂಯೋಜನೆಗಳನ್ನು ಪ್ರಯತ್ನಿಸಿದ್ದೇವೆ ಮತ್ತು ಅಂತಿಮವಾಗಿ ಈ ಸಂಯೋಜನೆಯನ್ನು ಕೊನೆಗೊಳಿಸಿದ್ದೇವೆ ಎಂದು ಸಾಯಿ ವಿಘ್ನೇಶ್ ಹೇಳಿರುವುದಾಗಿ ನ್ಯೂಸ್ ಮಿನಿಟ್ ವರದಿ ಮಾಡಿದೆ.