ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಹೊಂಬಾಳೆ ಫಿಲ್ಮ್ಸ್ ನ ಕಾಂತಾರ ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಟ ವಿಭಾಗಗಳಲ್ಲಿ ಅಕಾಡೆಮಿ ಪ್ರಶಸ್ತಿಗಳ ಸ್ಪರ್ಧೆಯ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದರರ್ಥ, ಚಲನಚಿತ್ರವು ಮುಖ್ಯ ನಾಮನಿರ್ದೇಶನಗಳಿಗೆ ಆಯ್ಕೆಯಾಗಲು ಆಸ್ಕರ್ ಸದಸ್ಯರು ಮತ ಚಲಾಯಿಸಲು ಅರ್ಹವಾಗಿದೆ.
ಕಾಂತಾರ ಆಸ್ಕರ್ ರೇಸ್ಗೆ ತಡವಾಗಿ ಪ್ರವೇಶ ಪಡೆದಿದೆ. ಇದರೊಂದಿಗೆ ಎಸ್ಎಸ್ ರಾಜಮೌಳಿ ಅವರ ಆರ್ಆರ್ಆರ್ ಮತ್ತು ರಿಷಬ್ ಶೆಟ್ಟಿ ಅವರ ಕಾಂತಾರ ಚಿತ್ರಗಳು ತಮ್ಮ ಆಸ್ಕರ್ ಪ್ರಯಾಣವನ್ನು ಪ್ರಾರಂಭಿಸಿವೆ. ಕಾಂತಾರ ಅಂತಿಮ ನಾಮನಿರ್ದೇಶನಕ್ಕೆ ಪ್ರವೇಶಿಸಲಿದೆಯೆ ಎನ್ನುವುದು ಶೀಘ್ರದಲ್ಲೇ ಗೊತ್ತಾಗಲಿದೆ.
ಈ ಬಗ್ಗೆ ನಿರ್ದೇಶಕ ರಿಷಬ್ ಶೆಟ್ಟಿ ಮಾಹಿತಿ ಹಂಚಿಕೊಂಡು, “ಕಾಂತಾರ ಚಿತ್ರಕ್ಕೆ 2 ಆಸ್ಕರ್ ಅರ್ಹತೆ ಸಿಕ್ಕಿದೆ ಎಂದು ಮಾಹಿತಿ ಹಂಚಿಕೊಳ್ಳಲು ನಮಗೆ ಅತೀವ ಸಂತಸವಾಗುತ್ತಿದೆ! ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಬೆಂಬಲದೊಂದಿಗೆ ಈ ಪ್ರಯಾಣದ ಖುಷಿಯನ್ನು ಹಂಚಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ. ಆಸ್ಕರ್ ನಲ್ಲಿ ಅದು ಮಿಂಚುವುದನ್ನು ನೋಡಲು ಕಾತುರರಾಗಿದ್ದೇವೆ” ಎಂದಿದ್ದಾರೆ.
ಕಾಂತಾರ 2023 ರ ಆಸ್ಕರ್ಗೆ ಸಲ್ಲಿಸಲ್ಪಟ್ಟಿತ್ತು ಮತ್ತು ಈಗ ಅದನ್ನು ಎರಡು ವಿಭಾಗಗಳಲ್ಲಿ ಸ್ಪರ್ಧಾ ಪಟ್ಟಿಗೆ ಸೇರಿಸಲಾಗಿದೆ.
ಹೊಂಬಾಳೆ ಪ್ರೊಡಕ್ಷನ್ಸ್ ಸಂಸ್ಥಾಪಕ ವಿಜಯ್ ಕಿರ್ಗಂದೂರು ಇಂಡಿಯಾ ಟುಡೇ ಜೊತೆ ಮಾತನಾಡುತ್ತಾ, “ನಾವು ಕಾಂತಾರ ಚಿತ್ರಕ್ಕಾಗಿ ಆಸ್ಕರ್ಗಾಗಿ ನಮ್ಮ ಅರ್ಜಿಯನ್ನು ಸಲ್ಲಿಸಿದ್ದೇವೆ ಮತ್ತು ಅಂತಿಮ ನಾಮನಿರ್ದೇಶನಗಳು ಇನ್ನೂ ಬರಬೇಕಾಗಿರುವುದರಿಂದ ಕಾಯುತ್ತಿದ್ದೇವೆ” ಎಂದಿದ್ದಾರೆ.
ಆಸ್ಕರ್ ಬ್ಯಾಲೆಟ್ ಮತದಾನವು ಜನವರಿ 11 ರಿಂದ ಪ್ರಾರಂಭವಾಗುತ್ತದೆ ಮತ್ತು ಜನವರಿ 17 ರವರೆಗೆ ನಡೆಯುತ್ತದೆ. ಅಂತಿಮ ನಾಮನಿರ್ದೇಶನಗಳು ಜನವರಿ 24 ರಂದು ಹೊರಬರುತ್ತವೆ.