ಮುಂಬಯಿ: ಕನ್ನಡ ಚಿತ್ರನಟಿ ಕಾಂತಾರ ಬೆಡಗಿ ಸಪ್ತಮಿಗೌಡ ಹಿಂದಿ ಚಿತ್ರಲೋಕದತ್ತ ಪಯಣ ಬೆಳೆಸಿದ್ದಾರೆ. ಕಾಶ್ಮೀರ್ ಫೈಲ್ಸ್ ಚಿತ್ರ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿಯ ಮುಂಬರುವ ಚಿತ್ರ “ವ್ಯಾಕ್ಸೀನ್ ವಾರ್” ನಲ್ಲಿ ಪ್ರಮುಖ ಪಾತ್ರದಲ್ಲಿ ಸಪ್ತಮಿ ನಟಿಸಲಿದ್ದಾರೆ.
ಈ ಬಗ್ಗೆ ನಿರ್ದೇಶಕ ವಿವೇಕ್ ರಂಜನ್ ಟ್ವೀಟ್ ಮಾಡಿದ್ದು, “ಸುಸ್ವಾಗತ ಸಪ್ತಮಿ ಗೌಡ, ದ ವ್ಯಾಕ್ಸೀನ್ ವಾರ್ ನ ನಿಮ್ಮ ಪಾತ್ರವು ಎಲ್ಲರ ಹೃದಯಗಳನ್ನು ಗೆಲ್ಲಲಿದೆ” ಎಂದಿದ್ದಾರೆ.
ಚಿತ್ರದ ಬಗ್ಗೆ ಹರ್ಷಾತುರರಾಗಿರುವ ಸಪ್ತಮಿ ಚಿತ್ರದಲ್ಲಿ ನೀಡಿರುವ ಅವಕಾಶಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ.
ಕಾಂತಾರದಲ್ಲಿ ಸಪ್ತಮಿಗೌಡ ಅವರ ಅಭಿನಯವು ಅತ್ಯಂತ ಮನೋಜ್ಞವಾಗಿತ್ತು ಮತ್ತು ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾಗಿತ್ತು.
ವಾಕ್ಸೀನ್ ವಾರ್ ಚಿತ್ರದ ಕಥೆಯನ್ನು ಕರೋನಾ ಸಮಯದಲ್ಲಿ ವೈಶ್ವಿಕ ಒತ್ತಡದ ನಡುವೆಯೂ ತಮ್ಮ ಜೀವದ ಹಂಗು ತೊರೆದು ಜನರ ಪ್ರಾಣ ಉಳಿಸಲು ಹೆಣಗಾಡಿದ ವ್ಯಾಕ್ಸೀನ್ ತಯಾರಿಸಿದ ವಿಜ್ಞಾನಿಗಳ ಸುತ್ತ ಹೆಣೆಯಲಾಗಿದೆ. ಚಿತ್ರದ ಶೂಟಿಂಗ್ ಲಕ್ನೋ ನಲ್ಲಿ ಅದಾಗಲೇ ಶುರುವಾಗಿದ್ದು, ಅನುಪಮ್ ಖೇರ್ ಮುಖ್ಯಭೂಮಿಕೆಯಲ್ಲಿರುವ ಚಿತ್ರವು ಈ ವರ್ಷ ಆಗಸ್ಟ್ 15 ರಂದು ತೆರೆಗೆ ಬರಲಿದೆ ಎನ್ನಲಾಗಿದೆ.