ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸಂಚಲನ ಸೃಷ್ಟಿಸಿದ ಸಿನಿಮಾಗಳ ಪೈಕಿ ಕಾಂತಾರವೂ ಒಂದಾಗಿದ್ದು, ಸಿನಿಮಾವು 15 ದಿನಗಳಲ್ಲಿ ವಿಶ್ವದಾದ್ಯಂತದ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಗಳಿಕೆ ಮಾಡಿದೆ. ಭಾರತದ ನಿವ್ವಳ ಸಂಗ್ರಹ 78.14 ಕೋಟಿ ರೂಗಳಾಗಿವೆ. ಇದಕ್ಕೂ ಮುಂಚೆ ಕನ್ನಡದ 5 ಚಲನಚಿತ್ರಗಳು ಈ ಇತಿಹಾಸ ನಿರ್ಮಿಸಿದ್ದು, ಕಾಂತಾರ ಸದ್ಯ 6 ನೇ ಸ್ಥಾನದಲ್ಲಿದೆ.
ವಿಶ್ವಾದ್ಯಂತ 1207 ಕೋಟಿ ರೂ ಗಳಿಸುವ ಮೂಲಕ ಹೊಂಬಾಳೆ ಬ್ಯಾನರ್ಸ್ ನ ಯಶ್ ಅಭಿನಯದ ಕೆಜಿಎಫ್ 2 ಅಗ್ರಸ್ಥಾನದಲ್ಲಿದ್ದರೆ, ಇದರ ಹಿಂದಿನ ಆವೃತ್ತಿ ಕೆಜಿಎಫ್-1 250 ಕೋಟಿ ರೂ ಸಂಗ್ರಹದೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಅನೂಪ್ ಭಂಡಾರಿ ನಿರ್ದೇಶನದ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ 159 ಕೋಟಿ ರೂ ಬಾಚಿ ಮೂರನೆ ಸ್ಥಾನದಲ್ಲಿದ್ದರೆ, ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ 151 ಕೋಟಿ ರೂ ಗಳಿಸಿ ನಾಲ್ಕನೇ ಸ್ಥಾನದಲ್ಲಿದೆ. ಕಿರಣ್ ರಾಜ್ ನಿರ್ದೇಶನದ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ 105 ಕೋಟಿ ರೂ ಗಳಿಕೆಯೊಂದಿಗೆ ಐದನೇ ಸ್ಥಾನದಲ್ಲಿದೆ.
ಪ್ರಸ್ತುತ 100 ಕೋಟಿ ರೂ ಗಳಿಕೆ ಮಾಡಿರುವ ಕಾಂತಾರ ಚಿತ್ರಕ್ಕೆ ಇನ್ನೂ ಕೂಡಾ ಜನ ಮುಗಿಬೀಳುತ್ತಿದ್ದು, ಸಿನಿಮಾ ಹಾಲ್‌ಗಳು ತುಂಬಿ ತುಳುಕುತ್ತಿವೆ. ಇದರ ಜೊತೆಗೆ ಹಿಂದಿ, ತೆಲುಗು, ತಮಿಳು, ಮಳೆಯಾಳಂ ಡಬ್ಬಿಂಗ್ ಆವೃತ್ತಿಗಳು ಕೂಡಾ ಹೊರಬರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಗಳಿಕೆಯ ಪ್ರಮಾಣ ಇನ್ನೂ ಹೆಚ್ಚಾಗಲಿದೆ ಎಂದು ಸಿನಿ ಪಂಡಿತರು ಅಂದಾಜಿಸುತ್ತಿದ್ದಾರೆ.
ಇದೇ ಹೊತ್ತಿನಲ್ಲಿ ಕಾಂತಾರ ಯಶಸ್ಸಿನ ಗುಂಗಿನಲ್ಲಿರುವ ಹೊಂಬಾಳೆ ಫಿಲಮ್ಸ್ ನ ತಂಡವು ತಮ್ಮ ಮುಂದಿನ ಚಿತ್ರ ‘ಸಲಾರ್’ ನ ಮುಖ್ಯ ಪಾತ್ರಧಾರಿ ಪೃಥ್ವಿ ಸುಕುಮಾರನ್ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿ ಅವರ ಜನ್ಮ ದಿನಕ್ಕೆ ಶುಭಹಾರೈಸಿದೆ. ಸಮಾನಾಂತರ ಅಥವಾ ಮುಖ್ಯವಾಹಿನಿ, ಕಲಾತ್ಮಕ ಅಥವಾ ವಾಣಿಜ್ಯ ಎಲ್ಲಾ ರೀತಿಯ ಪಾತ್ರಗಳಿಗೂ ಜೀವ ತುಂಬುವ ಬಹುಮುಖ ಪ್ರತಿಭೆ ಪೃಥ್ವಿಗೆ ಜನ್ಮ ದಿನದ ಶುಭಾಶಯಗಳು ಎಂದು ಹೊಂಬಾಳೆ ಟ್ವೀಟ್ ಮಾಡಿದೆ.
ಹಿಂದೆಂದೂ ಕಾಣದ ‘ವರದರಾಜ ಮನ್ನಾರ್’ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಳ್ಳಲಿದ್ದಾರೆ. ಕಾಂತಾರ ಸಿನಿಮಾದ ಮಳೆಯಾಳಂ ಆವೃತ್ತಿಯನ್ನು ಪೃಥ್ವಿ ತಮ್ಮ ಬ್ಯಾನರ್ ಅಡಿಯಲ್ಲಿ ತೆರೆಗೆ ತರಲಿದ್ದಾರೆ.