ದಿನದಿಂದ ದಿನಕ್ಕೆ ಯಶಸ್ಸಿನ ಮೆಟ್ಟಿಲನ್ನು ಏರುತ್ತಾ ಹೊಸ ಮೈಲಿಗಲ್ಲನ್ನು ಸ್ಥಾಪಿಸುತ್ತಿರುವ ಕಾಂತಾರ ಚಿತ್ರವು ಚಿತ್ರರಂಗದ ಎಲ್ಲ ದಾಖಲೆಗಳನ್ನು ಪುಡಿಗಟ್ಟುತ್ತಿದೆ.
ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಚಿತ್ರದ ನಿರ್ದೇಶಕ ರಿಷಭ್ ಶೆಟ್ಟಿ ಕಾಂತಾರದ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ.
ಇದು ತಾನಾಗಿಯೆ ಸಂಭವಿಸಿತು. ಸಿನಿಮಾಗೆ ಒಂದು ನಿರ್ದಿಷ್ಟ ಶಕ್ತಿಯಿದೆ ಮತ್ತು ಚಿತ್ರದಲ್ಲಿ ನಮ್ಮ ಸಂಸ್ಕೃತಿ ಮತ್ತು ಜನಪದದ ಬಗ್ಗೆ ಮಾತನಾಡಿದ್ದೇವೆ. ಹಾಗಾಗಿ, ದೇವರ ಆಶೀರ್ವಾದದಿಂದ ಚಿತ್ರವು ಪ್ಯಾನ್-ಇಂಡಿಯಾದಲ್ಲಿ ಬಿಡುಗಡೆಯಾಗಿದೆ ಎಂದು ನಾನು ಭಾವಿಸುತ್ತೇನೆ.
ಸಂಸ್ಕೃತಿ ಮತ್ತು ಜನಪದದ ಬಗ್ಗೆ ಆಳವಾಗಿ ಬೇರೂರಿರುವ ಚಿತ್ರದ ಬಗ್ಗೆ ಮಾತನಾಡುತ್ತಾ, ನನ್ನ ದೇಶ, ಗ್ರಾಮ, ಸಂಸ್ಕೃತಿ ಮತ್ತು ನನ್ನ ಭಾಷೆಯ ಕುರಿತಾದ ಕಥೆಗಳನ್ನು ನಾನು ಇಷ್ಟಪಡುತ್ತೇನೆ. ಮುಂದಿನ ಪೀಳಿಗೆಯು ನಮ್ಮ ಸಂಪ್ರದಾಯಗಳು ಮತ್ತು ಸಂಸ್ಕೃತಿಯ ಬಗ್ಗೆ ಏನನ್ನಾದರೂ ನೋಡುವಂತಿರಬೇಕು ಎಂದು ರಿಶಭ್ ಹೇಳಿದ್ದಾರೆ.
ದೈವದ ಬಗೆಗಿನ ವಿವಾದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ದೈವದ ಮುಂದೆ ಎಲ್ಲರೂ ಸಮಾನರು ಎಂಬುದು ನನ್ನ ಚಿತ್ರದ ವಿಷಯವಾಗಿತ್ತು. ಮೇಲ್ವರ್ಗ ಅಥವಾ ಕೆಳವರ್ಗ ಎಂಬುದಿಲ್ಲ. ಸಿನಿಮಾ ಮಾಡುವುದು ನನ್ನ ಕೆಲಸ ಎಂದಿದ್ದಾರೆ.
ಚಿತ್ರದಲ್ಲಿ ಮೂಢನಂಬಿಕೆಯನ್ನು ತೋರಿಸಲಾಗಿದೆ ಎನ್ನುವ ವಿಮರ್ಶೆಗೆ ಪ್ರತಿಕ್ರಿಯಿಸಿದ ರಿಷಭ್ ಚಿತ್ರದ ಮೂಲಕ ಸಕಾರಾತ್ಮಕತೆಯನ್ನು ಹರಡಲು ನಾವು ಬಯಸಿದ್ದೇವೆ. ನಾವು ಯಾರನ್ನೂ ನೋಯಿಸಲು ಬಯಸಲಿಲ್ಲ. ಯಾರಾದರೂ ಅದನ್ನು ಮೂಢನಂಬಿಕೆ ಎಂದು ಕರೆದರೆ, ನಾನು ಅದರ ಬಗ್ಗೆ ಏನನ್ನೂ ಮಾಡಲು ಸಾಧ್ಯವಿಲ್ಲ.
ಹಿಂದಿ ರಿಮೇಕ್‌ನಲ್ಲಿ ತನ್ನ ಪಾತ್ರವನ್ನು ಮಾಡಲು ಯಾರು ಸೂಕ್ತ ಎಂದು ಅವರು ಭಾವಿಸುತ್ತಾರೆ ಎಂದು ಕೇಳಿದಾಗ ಅಂತಹ ಪಾತ್ರಗಳನ್ನು ಮಾಡಲು ನೀವು ಬೇರುಗಳು ಮತ್ತು ಸಂಸ್ಕೃತಿಯನ್ನು ನಂಬಬೇಕು. ಹಿಂದಿ ಚಿತ್ರರಂಗದಲ್ಲಿ ನಾನು ಮೆಚ್ಚುವ ಅನೇಕ ದೊಡ್ಡ ನಟರಿದ್ದಾರೆ. ಆದರೆ ನನಗೆ ರೀಮೇಕ್‌ಗಳಲ್ಲಿ ಆಸಕ್ತಿ ಇಲ್ಲ ಎಂದು ರಿಷಭ್ ಹೇಳಿದ್ದಾರೆ ಎಂದು ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.
ಈ ಮಧ್ಯೆ ಕೇಂದ್ರ ಸಚಿವರಾದ ಪಿಯುಷ್ ಗೋಯಲ್ ಮತ್ತು ನಿರ್ಮಾಲಾ ಸೀತಾರಾಮನ್ ರವರು ಕಾಂತಾರ ಚಿತ್ರವನ್ನು ಬಾಯಿ ತುಂಬಾ ಹೊಗಳಿದ್ದಾರೆ. ಕಾಂತಾರವು ಸಣ್ಣ ಹೂದಿಕೆಯಿಂದ ದೊಡ್ಡ ಮಟ್ಟದ ಯಶಸ್ಸನ್ನು ಪಡೆದಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯುಷ್ ಗೋಯಲ್ ಹೇಳಿದ್ದರೆ, ತುಳುನಾಡು ಮತ್ತು ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರವಿದು ಎಂದು ಬೆಂಗಳೂರಿನಲ್ಲಿ ಸಿನಿಮಾ ವೀಕ್ಷಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ರಿಷಭ್ ಶೆಟ್ಟಿಯವರ ನಿರ್ದೇಶನ ಮತ್ತು ನಟನೆಯನ್ನು ಹೊಗಳಿದ್ದಾರೆ.