“ಕಾಂತಾರ” ನಮಗೆ ಕಾಣಿಸಿದ್ದೇನು? “ಕಾಂತಾರ” ಕ್ಕೆ ಸಿಗುವ ದೊಡ್ಡ ಗೆಲುವು ಯಾವುದೆಂದರೆ! :

♦ಪ್ರಸಾದ್ ಶೆಣೈ ಆರ್.ಕೆ
ಮ್ಮ ತುಳುನಾಡಿನ‌ ದೈವಗಳು, ಆ ದೈವಗಳ ಕಾರ್ಣೀಕಗಳು, ಅದರ ರೌದ್ರತೆ, ಅದು ನೀಡುವ ಅಭಯ, ಅದು ಹುಟ್ಟಿಸುವ ಭಯ. ಇವೆಲ್ಲವನ್ನೂ ಇನ್ನಷ್ಟು ಅಚ್ಚರಿ, ನಿಗೂಢತೆ ಬೆರೆಸಿ, ರಸವತ್ತಾದ ಕತೆಯಾಗಿಸಿ‌ ಹಿರಿಯರು ಹೇಳುವಾಗ ನಮ್ಮ ಕಲ್ಪನೆಯ ಹರಿವು ವಿಸ್ತಾರವಾಗುತ್ತಿತ್ತು, ನಮ್ಮ ನೆಲ‌ ಸಂಸ್ಕೃತಿಯ ಅರಿವೂ ಆಗುತ್ತಿತ್ತು.
ನಮ್ಮ ಬಾಲ್ಯವನ್ನು ಪೊರೆಯುತ್ತಿದ್ದುದು ಇದೇ ದೈವಗಳ ಕುರಿತ ಕತೆಗಳು. ಈಗಲೂ ನನಗೆ ದೈವಗಳ ಕುರಿತು ಧಾರ್ಮಿಕ ನಂಬಿಕೆಗಿಂತಲೂ ಜಾಸ್ತಿ ಅದೊಂದು ನಿಗೂಢತೆ, ರೋಚಕತೆ, ಬೆರಗುಗಳನ್ನು ತುಂಬಿಕೊಂಡ‌ ಕಾನನದಂತೆಯೇ ಕಾಡುತ್ತದೆ. ನಮ್ಮ ಮಣ್ಣಿನಲ್ಲೇ ಬದುಕುವ ಕೋಲ ಕಟ್ಟುವ ಕುಟುಂಬಗಳನ್ನು ಕೋಲ‌ ಮುಗಿದ ಮರುದಿನದ ಹಗಲಲ್ಲಿ ನೋಡಿದಾಗ ಅವರು ಸಾಮಾನ್ಯನಂತೆಯೇ ಇದ್ದುಬಿಡುತ್ತಿದ್ದರು, ಮತ್ತೆ ಇರುಳಾಗುತ್ತಲೇ ಅವರು ಎಲ್ಲಿಂದಲೋ‌ ಇಳಿದು ಬಂದ ಕಿನ್ನರರಂತೆ ಕೋಲ ಕಟ್ಟಲು ಅಣಿಯಾಗುತ್ತಿದ್ದುದು ನೋಡುವುದೇ ಒಂದು‌ ರೋಚಕ‌ ಅನುಭವ.
ಬರೆವ ಕತೆಗಳಿಗೆ, ಕಾಣುವ ಕನಸುಗಳಿಗೆ, ಮೂಡುವ ಬೆರಗಿಗೆ ಈಗಲೂ ನನಗೆ ಈ “ಭೂತ” ಗಳು “ವರ್ತಮಾನ‌” ದ ಬೆಳಕು. ಅದರ ಆರ್ಭಟ, ವೇಷ, ಕುಣಿತ, ಗತ್ತು, ವಾದ್ಯದ ಸದ್ದು ನಮ್ಮ ರಾತ್ರಿಯನ್ನು, ಕರಾವಳಿಯ ಆತ್ಮವನ್ನು ಈಗಲೂ ಬೆಳಗಿಸುತ್ತದೆ.
“ಕಾಂತಾರ” ಸಿನಿಮಾ, ತುಳುನಾಡಿನ ಭೂತಕಾಲದ, “ಭೂತ” ನಂಬಿದವರ, ನಂಬದವರ, ಕಾಡು ದೋಚುವವರ, ದೋಚುವ ಕಾಡನ್ನು ರಕ್ಷಿಸುವವರ ಕತೆಯನ್ನು ಹೇಳುತ್ತಲೇ ನಮ್ಮನ್ನು ಅಚ್ಚರಿಯಾಗಿಸುವ, ತುಳುನಾಡಿನ ಆ‌ ದಿನಗಳ ಉಳ್ಳವರ ಕ್ರೌರ್ಯ, ಇಲ್ಲದವರ ಅಸಹಾಯಕತೆ ಎಲ್ಲವನ್ನೂ ಹಿರಿಯ ಜೀವವೊಂದು ಮಡಿಲಲ್ಲಿ‌ ಕೂರಿಸಿ ಕತೆ ಹೇಳುವ ಹಾಗೆ ಹೇಳುತ್ತಲೇ ಹೋಗುತ್ತದೆ.
ಕೊನೆಗೆ ಶಿವ ದೈವವಾಗಿ ಅರಣ್ಯಾಧಿಕಾರಿ ಮುರುಳಿಗೆ ಕೊಡುವ ಅಭಯವಿದೆಯಲ್ಲವಾ “ಆ ಅಭಯದಲ್ಲಿ ನೀನು ಕಾಡನ್ನು,ಇಲ್ಲಿ ಬದುಕುವ ಜನರನ್ನು ಇನ್ನಷ್ಟು ಕಾಪಾಡು, ನಾ‌‌ ನಿನ್ನ‌‌ ಜೊತೆಗಿರುವೆ” ಎಂದು ಕಣ್ಣಲ್ಲೇ ಹೇಳಿದಂತೆ
“ನಾ ನಿನ್ನ ನಂಬುವೆ. ನನಗೆ ಯಾವತ್ತೂ ಶಕ್ತಿ ಕೊಡುತ್ತಿರು” ಎನ್ನುವಂತೆ ಅರಣ್ಯಾಧಿಕಾರಿ ಕಣ್ಣಲ್ಲೇ ದೈವಕ್ಕೆ ತಲೆಬಾಗುವಂತೆ ನಮಿಸಿದ್ದು” ಅಬ್ಬಾ ಈ‌ ದೃಶ್ಯದಲ್ಲಿ ಅದೆಂಥದ್ದೋ ಮಾಯಕವಾದದ್ದಿದೆ ಅನ್ನಿಸುತ್ತದೆ.
May be an illustration of 1 person and standing
ಇಡೀ ಸಿನಿಮಾದಲ್ಲಿ‌ ಮಾತಾಡದೇ ಇದ್ದರೂ ಧಣಿಯ ಹೆಂಡತಿಯ ಕಣ್ಣು , ಆ ಕಣ್ಣಲ್ಲಿರುವ ಅಸಹಾಯಕ‌ ನೋಟ, ಕೊನೆಗೆ ಆ ಕಣ್ಣು ತುಂಬಿಕೊಂಡದ್ದು ಆ ಕಾಲದ ಹೆಣ್ಣು ಮಕ್ಕಳ ಅಸಹಾಯಕ‌ ಸ್ಥಿತಿಯನ್ನು ಪ್ರತಿನಿಧಿಸಿದಂತೆ ಕಾಣುತ್ತದೆ.
ಶಿವು, ಧಣಿಗಳ‌ ಮನೆಯೊಳಗೆ ಪ್ರವೇಶಿಸಿದ್ದು, ಆ ಕಾಲದಲ್ಲಿ ಕೆಳಜಾತಿಯವರು ಮನೆಯೊಳಗೆ ಬರುವುದನ್ನು ಸಹಿಸಿಕೊಳ್ಳದಿದ್ದ ಮೇಲ್ವರ್ಗದವರ ಅಹಂಗೆ ಪೆಟ್ಟು ಕೊಟ್ಟದ್ದು “ನಾವು ನಿಮ್ಮ ಮನೆಗೆ ಬಂದರೆ ಅಶುದ್ಧವಾಗ್ತದೆ, ಹಾಗಾದ್ರೆ ನೀವು ನಮ್ಮ‌ ಮನೆಗೆ ಬಂದ್ರೆ ಅದು ಶುದ್ಧವಾಗ್ತದಾ ಧಣಿ, ಅಶುದ್ಧವಾಗುದಿಲ್ಲವಾ?” ಎಂದು ಶಿವು ಹೇಳಿದ್ದು, ಈ ಪ್ರಶ್ನೆ ಒಂದು‌ ಕಾಲದಲ್ಲಿ ಧ್ವನಿ ಕಳೆದುಕೊಂಡ ನೆಲ ಮೂಲದ ಮಕ್ಕಳ ಪ್ರಶ್ನೆಗೂ ಆಗಿತ್ತು.
ಆ ಕಾಲದಲ್ಲಿ ತುಳುನಾಡಿನ ಹೆಣ್ಣು‌ಮಕ್ಕಳ ಸ್ಥಿತಿ ಹೀಗಿತ್ತು, ಉಳ್ಳವರ ದಬ್ಬಾಳಿಕೆ ಜೋರಿತ್ತು, ಕಾಡು ಹೀಗಿತ್ತು, ಕಾಲ ಚಂದ ಇತ್ತು, ಭೇಟೆ ಜೋರಿತ್ತು, ಅನ್ನುವ ಹಿರಿಯರ ಮಾತುಗಳೆಲ್ಲಾ ಕೇಳಿದ್ದೇವಷ್ಟೇ. ಈಗ Rishab Shetty Films ರಿಷಬ್ ಶೆಟ್ಟಿ “ಕಾಂತಾರ” ದಲ್ಲಿ ಎಲ್ಲವನ್ನೂ ಕಾಣಿಸಿದ್ದಾರೆ. ಅವರ ಸಹನೆಗೆ,‌ ನಿಜಕ್ಕೂ‌ ನಮ್ಮ ನೆಲದ ಬಗೆಗಿರುವ ಅವರ ಅಪ್ಪಟ ಕಾಳಜಿಗೆ‌ ಪ್ರೀತಿಯ ನಮಸ್ಕಾರ.
ನಿಮಗೆ ದೈವದ ಬಗ್ಗೆ ನಂಬಿಕೆ‌ ಇರಬಹುದು, ಇರದೆಯೂ ಇರಬಹುದು‌ ಅದು ಮುಖ್ಯವಲ್ಲ. ಅವೆಲ್ಲವನ್ನ ಮರೆತು “ಕಾಂತಾರ ” ನೋಡಿ‌ ಬಿಡಿ. ಸಿನಿಮಾ‌ ನೋಡಿದ ಮೇಲೆ ನಿಜಕ್ಕೂ ಕೋಲ ನೋಡಬೇಕನ್ನಿಸಿದರೆ, ಕೋಲ‌ಕಟ್ಟುವ ನೆಲದ ಮಕ್ಕಳ‌ ಜೊತೆ ಮಾತಾಡಬೇಕು ಅನ್ನಿಸಿದರೆ, ಅವರು ಬದುಕಿದ ಕಾಡುಗಳನ್ನು ನೋಡಬೇಕು ಅಂತನ್ನಿಸಿದರೆ, ಎಲ್ಲಕ್ಕಿಂತಲೂ ಹೆಚ್ಚಾಗಿ‌ ಕರಾವಳಿ‌ ಬಿಟ್ಟು ಯಾವುದೋ‌ ಊರಲ್ಲಿ, ದೇಶದಲ್ಲಿ ಬದುಕುತ್ತಿರುವವರಿಗೆ ನಮ್ಮ‌‌ ಊರು, ನೆಲ, ಸಂಸ್ಕೃತಿ, ಪರಿಸರ ನೆನಪಾಗಿ ಅದನ್ನು ಅನುಭವಿಸುವುದಕ್ಕಾದರೂ ಊರಿಗೊಮ್ಮೆ ಬಂದು ಬಿಡಬೇಕು ಅನ್ನಿಸಿದರೂ ಸಾಕು.ಇದೇ “ಕಾಂತಾರ” ಕ್ಕೆ ಸಲ್ಲುವ ದೊಡ್ಡ ಪ್ರಶಸ್ತಿ. ಇದೇ ಸಿನಿಮಾ ಒಂದರ ಗೆಲುವೂ ಆಗುತ್ತದೆ.
♦ಪ್ರಸಾದ್ ಶೆಣೈ ಆರ್.ಕೆ