ಕನ್ನಂಗಾರ್ ಜುಮಾ ಮಸೀದಿಯ ಆಡಳಿತ ಕಮಿಟಿಯಿಂದ ಸಮುದಾಯ ಭವನ ದುರುಪಯೋಗ: ಕೆ.ಅಬ್ದುಲ್ ರೆಹಮಾನ್

ಉಡುಪಿ: ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಇಲಾಖೆಯ ಮೂಲಕ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಮುದಾಯ ಭವನವನ್ನು ಕನ್ನಂಗಾರ್ ಜುಮಾ ಮಸೀದಿಯ ಆಡಳಿತ ಕಮಿಟಿ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಜಿಲ್ಲಾ ವಕ್ಪ್ ಸಲಹಾ ಸಮಿತಿಯ ಸದಸ್ಯ ಕೆ.ಅಬ್ದುಲ್ ರೆಹಮಾನ್ ಆರೋಪಿಸಿದ್ದಾರೆ.

ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮಸೀದಿಯ ಮುಂಭಾಗ ನಿರ್ಮಿಸಲಾಗಿರುವ ಸಮುದಾಯ ಭವನವನ್ನು ಆಡಿಟೋರಿಯಂ ಎಂದು ಮಾಡಿ ಸಮಾರಂಭಗಳಿಗೆ ತಲಾ ರೂ. 30,000 ರಿಂದ 50,000 ಪಡೆಯಲಾಗುತ್ತಿದೆ. ಹಣ ಪಡೆದಿದ್ದಕ್ಕೆ ಅನಧಿಕೃತ ರಶೀದಿ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಲಾಭದಾಸೆಗೆ ಹಣ ಪಡೆದು ಬಾಡಿಗೆ:
ಸಮುದಾಯ ಭವನದಿಂದ ಬಂದ ಬಾಡಿಗೆ ಹಣದ ಲೆಕ್ಕಪತ್ರ ನಿರ್ವಹಣೆ ನಡೆದಿಲ್ಲ. ವಕ್ಫ್ ಮಂಡಳಿಗೆ ಆದಾಯ, ಖರ್ಚು ಹಾಗೂ ಬಾಡಿಗೆ ವಿವರ ಸಲ್ಲಿಸಿಲ್ಲ. ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಿರ್ಮಾಣ ಮಾಡಲಾಗಿರುವ ಭವನವನ್ನು ಲಾಭದಾಸೆಗೆ ಹೆಚ್ಚಿನ ಹಣ ಪಡೆದು ಬಾಡಿಗೆ ಕೊಡಲಾಗುತ್ತಿದೆ ಎಂದರು.

ಮಸೀದಿಗೆ ಯಾತ್ರಿ ನಿವಾಸ ನಿರ್ಮಾಣ ಮಾಡಲು ಸರ್ಕಾರ 20 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಯಾವುದೇ ಕಾಮಗಾರಿ ಮಾಡದೆ ಈಗಾಗಲೇ 5 ಲಕ್ಷ ಬಳಸಿಕೊಳ್ಳಲಾಗಿದೆ. ಈ ಕುರಿತು ವಕ್ಫ್ ಮಂಡಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ, 5 ಲಕ್ಷವನ್ನು ಮರುಪಾವತಿಸುವಂತೆ ಮಸೀದಿ ಸಮಿತಿಗೆ ಸೂಚನೆ ನೀಡಲಾಗಿದೆ. ಇದುವರೆಗೂ ಪಾವತಿ ಮಾಡಿಲ್ಲ ಎಂದರು.

ಹಣ ಹಾಗೂ ರಾಜಕೀಯ ಬೆಂಬಲದಿಂದ ವಕ್ಫ್ ಮಂಡಳಿಯ ನಿರ್ದೇಶನ ಹಾಗೂ ಸಲಹೆಗಳನ್ನು ಗಾಳಿಗೆ ತೂರಿ ಅವ್ಯವಹಾರ ನಡೆಸಲಾಗಿದೆ. ಕೂಡಲೇ ಈ ಬಗ್ಗೆ ತನಿಖೆ ನಡೆಯಬೇಕು. ಸಮಿತಿಗೆ ಆಡಳಿತಾಧಿಕಾರಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಈ ಹಾಲ್‌ನಲ್ಲಿ ಅಲ್ಲಿನ ಮುಸ್ಲಿಂ ಕುಟುಂಬದವರು ಮದುವೆ ಆಗಲೇ ಬೇಕು. ಬೇರೆ ಹಾಲ್‌ಗಳಲ್ಲಿ ಮದುವೆಯಾದರೆ 30 ಸಾವಿರ ದಂಡ ವಸೂಲಿ ಮಾಡಿ, ನಿಖಾ: ಕಾರ್ಯಕ್ರಮದಲ್ಲಿ ಇಲ್ಲಿನ ಮಸೀದಿ ಗುರುಗಳನ್ನು ಮತ್ತು ರಿಜಿಸ್ಟರ್ ಪುಸ್ತಕಗಳನ್ನು ಕಳುಹಿಸದೆ ಅನ್ಯಾಯ ಮಾಡುತ್ತಾರೆಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹನೀಫ್, ಎಚ್.ಕೆ.ಇದಿನಬ್ಬ, ಅಬ್ದುಲ್ ಅಜೀಜ್, ಎಚ್‌ಸಿಎನ್ ಹಾಜಿ ಉಪಸ್ಥಿತರಿದ್ದರು.