IFS ಪರೀಕ್ಷೆಯಲ್ಲಿ ಭರ್ಜರಿ ಸಾಧನೆ ಮಾಡಿದ ಕನ್ನಡದ ಹುಡುಗರು, ಬಸವರಾಜ ಕೆಂಪವಾಡ ದೇಶಕ್ಕೆ ಫಸ್ಟ್ ರ‍್ಯಾಂಕ್, ಮುಖ್ಯಮಂತ್ರಿ ಅಭಿನಂದನೆ

ಬೆಂಗಳೂರು: ಭಾರತೀಯ ಅರಣ್ಯ ಸೇವೆ (IFS) ಪರೀಕ್ಷೆಯಲ್ಲಿ ಕನ್ನಡಿಗರು ಭರ್ಜರಿ ಸಾಧನೆ ಮಾಡಿದ್ದು, ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಅಥಣಿ ತಾಲೂಕಿನ ಸವದಿಯ ಬಸವರಾಜ ಕೆಂಪವಾಡ ಅವರು ದೇಶಕ್ಕೆ ಪ್ರಥಮ ರ‍್ಯಾಂಕ್ ಪಡೆದು ಅನನ್ಯ ಸಾಧನೆ ಮಾಡಿದ್ದಾರೆ. ಇದೇ ವೇಳೆ ದೀಕ್ಷಿತ್ ಎನ್. ಅವರು 14ನೇ ರ‍್ಯಾಂಕ್ ಪಡೆದು ರಾಜ್ಯದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಈ ಸಾಧನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಕನ್ನಡಿಗರ ಪರಿಶ್ರಮ, ಆತ್ಮವಿಶ್ವಾಸ ಮತ್ತು ನಿರಂತರ ಪ್ರಯತ್ನ ಇದ್ದರೆ ಯಾವುದೇ ಕಠಿಣ ಗುರಿಯನ್ನೂ ಸಾಧಿಸಬಹುದು ಎಂಬುದಕ್ಕೆ ಇವರ ಸಾಧನೆಯೇ ಸಾಕ್ಷಿ” ಎಂದು ಹೇಳಿದ್ದಾರೆ.

ಅರಣ್ಯ, ವನ್ಯಜೀವಿ ಹಾಗೂ ಪರಿಸರ ಸಂಪನ್ಮೂಲಗಳ ಸಂರಕ್ಷಣೆಯಲ್ಲಿ ಈ ಯುವ ಅಧಿಕಾರಿಗಳು ರಾಷ್ಟ್ರಕ್ಕೆ ಮಹತ್ತರ ಕೊಡುಗೆ ನೀಡಲಿ ಎಂದು ಸಿಎಂ ಹಾರೈಸಿದ್ದಾರೆ. “ಇವರ ಸಾಧನೆ ಪ್ರತಿಯೊಬ್ಬ ಕನ್ನಡಿಗನಿಗೂ ಸ್ಪೂರ್ತಿದಾಯಕ. ವಿಶಿಷ್ಟ ಸಾಧನೆಗೈದ ಈ ಯುವ ಕನ್ನಡಿಗರಿಗೆ ಹೃತ್ಪೂರ್ವಕ ಅಭಿನಂದನೆಗಳು” ಎಂದು ಫೋಟೋ ಸಮೇತ ಶುಭಾಶಯ ಕೋರಿದ್ದಾರೆ.

2025ನೇ ಸಾಲಿನ ಭಾರತೀಯ ಅರಣ್ಯ ಸೇವೆ ಪರೀಕ್ಷೆಯ ಫಲಿತಾಂಶ ಶುಕ್ರವಾರ (ಮೇ 8, 2026) ಪ್ರಕಟಗೊಂಡಿದ್ದು, ಇದರಲ್ಲಿ ಬಸವರಾಜ ಕೆಂಪವಾಡ ಅವರು ದೇಶದಲ್ಲೇ ಮೊದಲ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

ಬಸವರಾಜ ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದವರು. ಒಂದರಿಂದ ಐದನೇ ತರಗತಿವರೆಗೆ ಸ್ವಗ್ರಾಮದಲ್ಲೇ ಶಿಕ್ಷಣ ಪಡೆದ ಅವರು, ಬಳಿಕ ರಾಯಬಾಗ ತಾಲೂಕಿನ ಅಳಗವಾಡಿ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪೂರ್ಣಗೊಳಿಸಿದರು. ಜಮಖಂಡಿಯಲ್ಲಿ ಪಿಯುಸಿ ಓದಿದ ನಂತರ ಶಿರಶಿಯಲ್ಲಿ ಅರಣ್ಯ ವಿಭಾಗದಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ. ನಂತರ ಬೆಂಗಳೂರಿನಲ್ಲಿ ಉನ್ನತ ಅಧ್ಯಯನ ಕೈಗೊಂಡಿದ್ದರು.

ಕೃಷಿಕ ಕುಟುಂಬದಿಂದ ಬಂದಿರುವ ಬಸವರಾಜ ಅವರ ಕುಟುಂಬಕ್ಕೆ ಸುಮಾರು ಮೂರುವರೆ ಎಕರೆ ಜಮೀನಿದ್ದು, ಮಗನ ಸಾಧನೆಗೆ ಪೋಷಕರು ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.