ಮಂಗಳೂರು: ನನ್ನನ್ನು ಬೆಳೆಸಿದ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ ಎಂದು ನಟಿ, ನಿರೂಪಕಿ ಅನುಶ್ರೀ ಹೇಳಿದ್ದಾರೆ.
ವಿಡಿಯೊ ಹೇಳಿಕೆ ಮೂಲಕ ತನಗಾದ ನೋವನ್ನು ಹಂಚಿಕೊಂಡಿದ್ದಾರೆ. ಸೆ. 24 ರಂದು ನನ್ನ ಪಾಲಿನ ಕರಾಳ ದಿನ. ಆ ದಿನವನ್ನು ನನ್ನ ಜೀವನದ ಯಾವ ಘಟ್ಟದಲ್ಲೂ ನೆನಪಿಸಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಭಾವುಕರಾಗಿ ನುಡಿದಿದ್ದಾರೆ.
ಸಿಸಿಬಿ ವಿಚಾರಣೆಗೆ ಕರೆದಿರುವುದಕ್ಕೆ ಬೇಸರವಿಲ್ಲ. ಆದರೆ, ಅದರ ನಂತರ ಆರಂಭವಾಗಿರುವ ಅಂತೆ ಕಂತೆಗಳಿಂದ ನನ್ನ ಕುಟುಂಬಕ್ಕೆ ಸಾಕಷ್ಟು ನೋವಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ.
ದಯವಿಟ್ಟು ಈ ರೀತಿಯ ಸುದ್ದಿಗಳನ್ನು ಮಾಡುವ ಮೊದಲು ನನ್ನ ಕುಟುಂಬದವರ ಬಗ್ಗೆ ಒಮ್ಮೆ ಯೋಚಿಸಿ ಎಂದು ಹೇಳಿರುವ ಅವರು, ನನ್ನ ಬೆಂಬಲಕ್ಕೆ ನಿಂತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.