ಕನ್ನಡದಲ್ಲಿ ವಿಜ್ಞಾನ ಉಪನ್ಯಾಸ ಸ್ಪರ್ಧೆ

ಉಡುಪಿ: ವಿಜ್ಞಾನವನ್ನು ಮಾತೃ ಭಾಷೆಯ ಮೂಲಕ ಜನ ಸಾಮಾನ್ಯರ ಬಳಿಗೆ ಕೊಂಡೊಯ್ಯುವ, ಶೈಕ್ಷಣಿಕ ವಲಯದಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಹಾಗೂ ಕನ್ನಡದಲ್ಲಿ ಆಕರ್ಷಕವಾಗಿ ಜನಪ್ರಿಯ ಶೈಲಿಯಲ್ಲಿ ವಿಜ್ಞಾನದ ಸಂವಹನ ಸಾಧ್ಯ ಎಂಬುದನ್ನು ಸಾಬೀತುಗೊಳಿಸಲು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ವಿಜ್ಞಾನ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಹಾಗೂ ಬಿ.ಈಡಿ ಪ್ರಶಿಕ್ಷಣಾರ್ಥಿಗಳಿಗೆ ಅಂತರ ವಿಶ್ವ ವಿದ್ಯಾಲಯ ಮಟ್ಟ ಮತ್ತು ರಾಜ್ಯ ಮಟ್ಟದಲ್ಲಿ ಕನ್ನಡ ವಿಜ್ಞಾನ ಉಪನ್ಯಾಸ
ಸ್ಪರ್ಧೆಯನ್ನು ರಾಜ್ಯಾದ್ಯಂತ ಆಯೋಜಿಸಲಾಗುತ್ತಿದೆ.
ರಾಜ್ಯದ ಯಾವುದೇ ವಿಶ್ವ ವಿದ್ಯಾಲಯದ ಅಡಿಯಲ್ಲಿ ಮೂಲ ವಿಜ್ಞಾನವನ್ನು (ಭೌತಶಾಸ್ತ್ರ, ಜೀವಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ವಿಷಯಗಳನ್ನು) ವ್ಯಾಸಾಂಗ ಮಾಡುತ್ತಿರುವ ಪದವಿ ವಿದ್ಯಾರ್ಥಿಗಳು ಹಾಗೂ ಪಿ.ಸಿ.ಎಂ. ಅಥವಾ ಸಿ.ಬಿ.ಜಡ್. ಬೋಧನಾ ವಿಧಾನ ಆಯ್ದುಕೊಂಡಿರುವ ಬಿ.ಈಡಿ ಪ್ರಶಿಕ್ಷಣಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ವಿಶ್ವ ವಿದ್ಯಾಲಯ ಮಟ್ಟದ ಸ್ಪರ್ಧೆಯಲ್ಲಿ ಭೌತಶಾಸ್ತ್ರ, ಜೀವಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ವಿಭಾಗಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಲಾ ಇಬ್ಬರು ವಿದ್ಯಾರ್ಥಿಗಳಂತೆ ಒಟ್ಟು 8 ವಿದ್ಯಾರ್ಥಿಗಳನ್ನು ಒಂದು ವಿಶ್ವ ವಿದ್ಯಾಲಯದಿಂದ ಆಯ್ಕೆ ಮಾಡಲಾಗುತ್ತದೆ. ವಿಶ್ವ ವಿದ್ಯಾಲಯ ಮಟ್ಟದ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ.
ಆಸಕ್ತ ವಿದ್ಯಾರ್ಥಿಗಳು ನಿಗದಿತ ಅರ್ಜಿಯನ್ನು ಮಾರ್ಚ್ 2 ರ ಒಳಗೆ ಕರಾವಿಪ
ಕೇಂದ್ರ ಕಚೇರಿ, ವಿಜ್ಞಾನ ಭವನ, ಬೆಂಗಳೂರು ಇಲ್ಲಿಗೆ ಸಲ್ಲಿಸಬೇಕು. ಅಂತರ ವಿಶ್ವ ವಿದ್ಯಾಲಯ ಮಟ್ಟ ಮತ್ತು ರಾಜ್ಯ ಮಟ್ಟದ ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 080-2671829, 9008442557 ಅನ್ನು
ಸಂಪರ್ಕಿಸುವಂತೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.