ಕನ್ನಡ ರಾಜ್ಯೋತ್ಸವ : ಠಾಗೋರ್ ಕಡಲ ತೀರದಲ್ಲಿ ಹಾರಾಡಿದ ನೂರಾರು ಹಳದಿ, ಕೆಂಪು ಗಾಳಿಪಟಗಳು

ಕಾರವಾರ: ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣಗೊಂಡು 50 ವರ್ಷಗಳು ಪೂರ್ಣಗೊಂಡಿವೆ.ಈ ಸಂಭ್ರಮವನ್ನು ವಿಶೇಷವಾಗಿ ಆಚರಿಸಲು ರಾಜ್ಯ ಸರ್ಕಾರ ಪ್ರತಿ ಜಿಲ್ಲಾಡಳಿತಕ್ಕೂ ಸೂಚನೆ ನೀಡಿದೆ. ಉತ್ತರ ಕನ್ನಡ ಜಿಲ್ಲಾಡಳಿತದ ವತಿಯಿಂದ ಪ್ರಸಿದ್ಧ ರವೀಂದ್ರನಾಥ​ ಠಾಗೋರ್ ಕಡಲ ತೀರದಲ್ಲಿ ಕೆಂಪು ಮತ್ತು ಹಳದಿ ಬಣ್ಣದ ನೂರಾರು ಗಾಳಿಪಟಗಳನ್ನು ಇಂದು ಬೆಳಿಗ್ಗೆ ಹಾರಿಸಲಾಯಿತು. ಈ ಮೂಲಕ ವಿಶೇಷವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯಿತು. ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಿ 50 ವರ್ಷ ಪೂರ್ಣಗೊಂಡಿದ್ದು, ಕಡಲನಗರಿ ಕಾರವಾರದಲ್ಲಿ ನೂರಾರು ಹಳದಿ ಮತ್ತು ಕೆಂಪು ಬಣ್ಣದ ಗಾಳಿಪಟಗಳನ್ನು ಹಾರಿಸಿ, ಸಂಭ್ರಮಿಸಲಾಯಿತು.

ಈ ಬಾರಿ ವಿಶೇಷ ರಾಜ್ಯೋತ್ಸವ ಸಂಭ್ರಮ: ಮೈಸೂರು ರಾಜ್ಯ 1973ರ ಅಕ್ಟೋಬರ್‌ 20ರಂದು ಕರ್ನಾಟಕ ಎಂದು ಮರು ನಾಮಕರಣಗೊಂಡಿದ್ದು 50 ವರ್ಷ ಪೂರೈಸಿದೆ. ಈ ಐತಿಹಾಸಿಕ ಸಂದರ್ಭದಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ ಸಾರುವಂತಹ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ, ವರ್ಷವಿಡೀ ಆಯೋಜಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಒಂದೆಡೆ ನೂರಾರು ಸಂಖ್ಯೆಯಲ್ಲಿ ಕಡಲ ತೀರದಲ್ಲಿ ಸೇರಿರುವ ಜನರು, ಮತ್ತೊಂದೆಡೆ ಗಾಳಿಪಟವನ್ನು ಕೈಯಲ್ಲಿ ಹಿಡಿದು ಕಡಲ ತೀರದಲ್ಲಿ ಹಾರಿಸುತ್ತಾ ಖುಷಿ ಪಡುತ್ತಿರುವ ಪ್ರವಾಸಿಗರು, ಇನ್ನೊಂದೆಡೆ ಜಿಲ್ಲಾಧಿಕಾರಿ ಸಹ ಗಾಳಿಪಟ ಹಾರಿಸುತ್ತಾ ಸಂಭ್ರಮಿಸುತ್ತಿರುವ ದೃಶ್ಯ ಕಂಡುಬಂತು. ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಆಗಮಿಸಿ ಕನ್ನಡ ಬಾವುಟದ ಹಳದಿ ಹಾಗೂ ಕೆಂಪು ಬಣ್ಣದ ನೂರಾರು ಗಾಳಿಪಟಗಳನ್ನು ಪ್ರವಾಸಿಗರಿಗೆ ವಿತರಿಸಿ, ಏಕಕಾಲಕ್ಕೆ ಹಾರಿಸಿದರು.