ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಮಂಗಳೂರು: ಕನ್ನಡ ಎಂಬುದು ಕೇವಲ ಆಡು ಭಾಷೆ ಮಾತ್ರವಲ್ಲ, ಭಾರತದಂತಹ ದೇಶದಲ್ಲಿ ಕನ್ನಡವು ಸಂಸ್ಕೃತಿಯ ಪ್ರತಿರೂಪ. ಇಂಗ್ಲೀಷ್ ನಮಗೆ ಅವಕಾಶದ ಭಾಷೆ. ಆದರೆ ಕನ್ನಡ ಹಾಗಲ್ಲ. ಕನ್ನಡ ನಾಡು -ನುಡಿ-ಸಂಸ್ಕೃತಿಯು ವೈವಿಧ್ಯತೆಯಿಂದ ಕೂಡಿದ್ದು, ವೈವಿಧ್ಯತೆ ಈ ಸಂಸ್ಕೃತಿಯ ಉಸಿರು. ಇಂತಹ ನಾಡಿನಲ್ಲಿ ಜನಿಸಿದ ನಾವೇ ಧನ್ಯರು ಎಂದು ಎಕ್ಸ್ಪರ್ಟ್ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಪ್ರೊ.ರಾಮಚಂದ್ರಭಟ್‌ ಹೇಳಿದರು.

ಅವರು ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿಯ ಬೇರು ಇನ್ನಷ್ಟು ಗಟ್ಟಿಯಾಗಿ ಭದ್ರವಾಗಬೇಕಾದರೆ ಕನ್ನಡ ಭಾಷೆ ಕೂಡ ಗಟ್ಟಿಯಾಗಬೇಕು. ಕನ್ನಡ ಭಾಷೆ ಗಟ್ಟಿಯಾಗ ಬೇಕಾದರೆ ಕನ್ನಡಿಗರಾದ ನಾವು ಭಾಷೆಯನ್ನು ಉಳಿಸಿ ಬೆಳೆಸಬೇಕು. ಭಾಷೆ, ಸಾಹಿತ್ಯ ಸಂಸ್ಕೃತಿ ಇವುಗಳಿಗೆ ಒಂದಕ್ಕೊಂದು ಅವಿನಾಭಾವ ಸಂಬಂಧವಿದೆ. ಕನ್ನಡಾಂಬೆಯ ಕೀರ್ತಿ ಪತಾಕೆ ಇನ್ನಷ್ಟು ಎತ್ತರಕ್ಕೆ ಏರಬೇಕು ಎಂದು ಆಶಿಸಿದರು.

ವಿದ್ಯಾರ್ಥಿಗಳಿಂದ ಕನ್ನಡ ನಾಡು-ನುಡಿಯ ಕುರಿತು ಹಾಡು, ಕವನ ವಾಚನ, ನೃತ್ಯ, ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ನೆರೆವೇರಿತು. ಕಾರ್ಯಕ್ರಮದ ಕೊನೆಗೆ ಕನ್ನಡ ನಾಡು-ನುಡಿಯ ಕುರಿತು ರಸಪ್ರಶ್ನೆ ಆಯೋಜಿಸಿಲಾಗಿತ್ತು.

ಈ ಸಂದರ್ಭದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಕರುಣಾಕರ ಬಳ್ಕೂರು, ಕನ್ನಡ ಉಪನ್ಯಾಸಕಿ ರಮ್ಯ ಅನಿಲ್ ಹಾಗೂ ಇನ್ನಿತರ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.

ಪ್ರಥಮ ಪಿ.ಯು.ಸಿ ವಿಧ್ಯಾರ್ಥಿನಿ ದೀಪಿಕಾ ಬಿ.ಅರಳಿಕಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.