ಕನ್ನಡ ಚಿತ್ರಗಳ ಪೋಷಕ ನಟ ಲಕ್ಷ್ಮಣ್ ಹೃದಯಾಘಾತದಿಂದ ನಿಧನ

ಬೆಂಗಳೂರು: ಕನ್ನಡ ಚಲನಚಿತ್ರಗಳಲ್ಲಿ ಪೋಷಕ ಪಾತ್ರದಿಂದ ಗಮನ ಸೆಳೆದಿದ್ದ ನಟ ಲಕ್ಷ್ಮಣ್ ಅವರು ಇಂದು (ಜನವರಿ 23) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಭಾನುವಾರ (ಜನವರಿ 22ರಂದು) ರಾತ್ರಿ ಲಕ್ಷ್ಮಣ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಇಂದು ಮುಂಜಾನೆ 3.30 ಸುಮಾರಿಗೆ ಅವರನ್ನು ನಾಗರಬಾವಿಯಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೂ ದುರದೃಷ್ಟವಶಾತ್ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಅವರ ಸ್ವಗೃಹದಲ್ಲಿಡಲಾಗಿದೆ.

ಲಕ್ಷ್ಮಣ್ ವಿಷ್ಣುದಾದ ಜೊತೆ ಯಜಮಾನ, ಸೂರ್ಯವಂಶ ಸೇರಿದಂತೆ ಅಂಬರೀಷ್, ಶಂಕರ್ ನಾಗ್ ಮುಂತಾದವರ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರ ಮಾಡಿದ್ದರು. ವೃತ್ತಿ ಜೀವನದಲ್ಲಿ 200ಕ್ಕೂ ಅಧಿಕ ಸಿನಿಮಾಗಳಲ್ಲಿ ಲಕ್ಷ್ಮಣ್ ಅಭಿನಯ ಚಾತುರ್ಯ ತೋರಿದ್ದರು.