ಬೆಂಗಳೂರು: ರಾಜ್ಯ ಸರ್ಕಾರವು ಎಲ್ಲ ಅಧಿಕೃತ ಉದ್ದೇಶಗಳಿಗೆ ಕನ್ನಡ ಮಾತೆ, ಭುವನೇಶ್ವರಿ ದೇವಿಯ ಚಿತ್ರವನ್ನು ಚಿತಪಡಿಸಲು ಸರ್ಕಾರವು ನೇಮಿಸಿದ ಐದು ಸದಸ್ಯರ ಸಮಿತಿಯು ಚಿತ್ರವನ್ನು ಅಂತಿಮಗೊಳಿಸಿದೆ.
ನಾಡದೇವಿಯ ನಿರ್ದಿಷ್ಟ ಚಿತ್ರದ ಕೊರತೆಯಿರುವುದನ್ನು ಮನಗಂಡ ಸರ್ಕಾರ ಎಲ್ಲ ಅಧಿಕೃತ ಉದ್ದೇಶಗಳಿಗೆ ಉಪಯೋಗಿಸಲು ಏಕಪ್ರಕಾರದ ಚಿತ್ರವನ್ನು ಆಯ್ಕೆ ಮಾಡಲು ಡಿ.ಮಹೇಂದ್ರ ಅವರ ಅಧ್ಯಕ್ಷತೆಯಲ್ಲಿ ಐವರು ಚಿತ್ರಕಲಾವಿದರ ಸಮಿತಿಯನ್ನು ರಚಿಸಿತ್ತು.
ಲಲಿತಾ ಕಲಾ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಡಿ. ಮಹೇಂದ್ರ ಅವರ ಅಧ್ಯಕ್ಷತೆಯ ಈ ಸಮಿತಿಯು ಕರ್ನಾಟಕ ರಾಜ್ಯದ ನಾಡದೇವತೆಯ ಅಧಿಕೃತ ಚಿತ್ರದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಕಲೆಯನ್ನು ಬಿಂಬಿಸುವ ಹಾಗೂ ನಾಡಗೀತೆಯಲ್ಲಿರುವ ಕೆಲವು ಅಂಶಗಳನ್ನು ಸಾಂಕೇತಿಕವಾಗಿ ಬಳಸಿಕೊಂಡು ಚಿತ್ರ ರಚಿಸುವಂತೆ ಕಲಾವಿದರಾದ ಕೆ. ಸೋಮಶೇಖರ್ ಅವರಿಗೆ ಕೇಳಿತ್ತು. ಅದರಂತೆ ಕಲಾವಿದರು ಚಿತ್ರವನ್ನು ರಚಿಸಿ ಕಳೆದ 15 ದಿನಗಳ ಹಿಂದೆ ಸಮಿತಿಗೆ ಸಲ್ಲಿಸಿದ್ದರು. ಇದೀಗ ಸಮಿತಿಯು ಆ ಭಾವಚಿತ್ರವನ್ನು ಅಂಗೀಕರಿಸಿ ಅಧಿಕೃತ ನಾಡದೇವತೆಯ ಚಿತ್ರವೆಂದು ಘೋಷಿಸಲು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಕರ್ನಾಟಕದ ನಾಡದೇವತೆಯ ಪರಿಪೂರ್ಣ ಏಕರೂಪದ ಭಾವಚಿತ್ರವನ್ನು ಅಧಿಕೃತಗೊಳಿಸಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಬಳಸಲು ಸರ್ಕಾರ ಶೀಘ್ರವೇ ಅಧಿಸೂಚನೆ ಪ್ರಕಟಿಸಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅದನ್ನು ಅಂಗೀಕರಿಸಿದೆ. ಮುಖ್ಯಮಂತ್ರಿಯವರ ಗಮನಕ್ಕೆ ಈ ಪ್ರಸ್ತಾವನೆಯನ್ನು ಸಲ್ಲಿಸಿ ಅವರಿಂದ ಒಪ್ಪಿಗೆ ಪಡೆದ ಬಳಿಕ ಭುವನೇಶ್ವರಿಯ ಭಾವಚಿತ್ರವನ್ನು ಸರ್ಕಾರವೇ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈಗ ಸಲ್ಲಿಕೆಯಾಗಿರುವ ತಾಯಿ ಭುವನೇಶ್ವರಿಯ ಚಿತ್ರದಲ್ಲಿ ನಾಡಿನ ಹಲವು ವಿಶೇಷಗಳು ಒಳಗೊಂಡಿವೆ. ಆ ಚಿತ್ರವೇ ಇನ್ನು ಮುಂದೆ ರಾಜ್ಯದ ಎಲ್ಲ ಕಡೆ ಪ್ರದರ್ಶಿಸಲ್ಪಡಬೇಕು. ಹೊಯ್ಸಳರು, ಕದಂಬರು, ಮೈಸೂರು ಅರಸರು ಸೇರಿ ರಾಜ್ಯವನ್ನು ಆಳಿದ ಹಲವು ಪ್ರಮುಖ ರಾಜಮನೆತನಗಳ ವೈಶಿಷ್ಟ್ಯಗಳು ಭುವನೇಶ್ವ ರಿಯ ಚಿತ್ರದಲ್ಲಿ ಅಡಕವಾಗಿದೆ. ಇನ್ನು ಮುಂದೆ ಅದೇ ಅಧಿಕೃತ ನಾಡದೇವತೆ ಚಿತ್ರವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.