ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದದ ನಡುವೆ ಕನ್ನಡದ ಸೂಪರ್‌ಸ್ಟಾರ್‌ಗಳಾದ ದರ್ಶನ್ ತೂಗುದೀಪ ಮತ್ತು ಕಿಚ್ಚ ಸುದೀಪ್ ಅವರು ತಮ್ಮ ಕಾಳಜಿಯನ್ನು ವ್ಯಕ್ತಪಡಿಸಲು ಮತ್ತು ನಿರ್ಣಯಕ್ಕಾಗಿ ವಕಾಲತ್ತು ವಹಿಸಲು ಮುಂದಾಗಿದ್ದಾರೆ.
ಸಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸುದೀಪ್ ಬುಧವಾರದಂದು “ಕಾವೇರಿ ನಮ್ಮ ಹಕ್ಕು” ಎಂದು ಬರೆದು ಜನರ ಪ್ರತಿ ಸರ್ಕಾರದ ಬದ್ಧತೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಂತ್ರಗಾರಿಕೆಯನ್ನು ರೂಪಿಸಲು ತಜ್ಞರು ತಕ್ಷಣ ಮಧ್ಯಪ್ರವೇಶಿಸಬೇಕೆಂದು ಅವರು ಕರೆ ನೀಡಿದ್ದಾರೆ.
“ಸ್ನೇಹಿತರೆ, ನಮ್ಮ ಕಾವೇರಿ ನಮ್ಮ ಹಕ್ಕು . ಅಷ್ಟು ಒಮ್ಮತದಿಂದ ಗೆಲ್ಲಿಸಿರುವ ಸರ್ಕಾರ ಕಾವೇರಿಯನ್ನೇ ನಂಬಿರುವ ಜನರನ್ನು ಕೈಬಿಡುವುದಿಲ್ಲ ಎಂದು ನಾನು ನಂಬಿದ್ದೇನೆ . ಈ ಕೂಡಲೇ ತಜ್ಞರು ಕಾರ್ಯತಂತ್ರ ರೂಪಿಸಿ ನ್ಯಾಯ ನೀಡಲಿ ಎಂದು ಒತ್ತಾಯಿಸುತ್ತೇನೆ . ನೆಲ -ಜಲ -ಭಾಷೆಯ ಹೋರಾಟದಲ್ಲಿ ನನ್ನ ಧ್ವನಿಯೂ ಇದೆ. ಕಾವೇರಿ ತಾಯಿ ಕರುನಾಡನ್ನು ಕಾಪಾಡಲಿ” ಎಂದು ಅವರು ಬರೆದಿದ್ದಾರೆ.
ಇದೇ ವೇಳೆ ದರ್ಶನ್ ತೂಗುದೀಪ ಅವರು ರಾಜ್ಯದ ಜನತೆ ಎದುರಿಸುತ್ತಿರುವ ನೀರಿನ ಕೊರತೆಯನ್ನು ಎತ್ತಿ ತೋರಿಸಿದ್ದಾರೆ.
“ಕರ್ನಾಟಕದ ಪಾಲಿನ ಕಾವೇರಿ ನೀರನ್ನು ಕಡಿತಗೊಳಿಸಿ ಹೆಚ್ಚಿನ ನೀರು ಪಡೆಯುವ ಪ್ರಯತ್ನ ನಿರಂತರವಾಗಿ ನಡೆದಿದೆ. ಈ ವರ್ಷ ರಾಜ್ಯದಲ್ಲಿ ನೀರಿನ ಅಭಾವ ಹೆಚ್ಚಿದೆ. ಈ ವೇಳೆ ನೀರಾವರಿ ಪ್ರದೇಶಕ್ಕೆ ಸಾಕಷ್ಟು ಹಾನಿಯಾಗಿದ್ದು, ಎಲ್ಲ ಅಂಕಿಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ದೊರಕಿಸಿಕೊಡೋಣ” ಎಂದು ಅವರು ಎಕ್ಸ್ ನಲ್ಲಿ ಬರೆದಿದ್ದಾರೆ.