ಕನ್ನಡ ನಟ ನಿರ್ದೇಶಕ ದ್ವಾರಕೀಶ್‌ ನಿಧನ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್‌ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಇವರು ಬಳಲುತ್ತಿದ್ದರು. ನಟ ದ್ವಾರಕೀಶ್‌ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಅವರ ಮನೆಯಲ್ಲಿಯೇ ನಿಧನರಾಗಿದ್ದಾರೆ ಎಂದು ದ್ವಾರಕೀಶ್‌ ಪುತ್ರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ 1942 ಆಗಸ್ಟ್ 19ರಂದು ಜನಿಸಿದ ಇವರು ಕನ್ನಡದ ಪ್ರತಿಭಾನ್ವಿತ ನಟರಾಗಿ ಹೆಸರುವಾಸಿಯಾಗಿದ್ದರು.

ಆರಂಭಿಕ ಶಿಕ್ಷಣವನ್ನು ಶಾರದಾ ವಿಲಾಸ್‌ ಮತ್ತು ಬಾನುಮಯ್ಯ ಸ್ಕೂಲ್‌ನಲ್ಲಿ ಪಡೆದರು. ಸಿಪಿಸಿ ಪಾಲಿಟೆಕ್ನಿಕ್‌ನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದರು. ಶಿಕ್ಷಣ ಪೂರ್ಣಗೊಂಡ ಬಳಿಕ ಇವರ ಸಹೋದರ ವಾಹನ ಬಿಡಿಭಾಗಗಳ ಬಿಸ್ನೆಸ್‌ ಆರಂಭಿಸಿದರು. ಭಾರತ್‌ ಆಟೋ ಸ್ಪೇರ್‌ ಹೆಸರಿನ ಶಾಪ್‌ ಅನ್ನು ಮೈಸೂರಿನಲ್ಲಿ ತೆರೆದಿದ್ದರು. ಮಾವ ಹುಣಸೂರು ಕೃಷ್ಣಮೂರ್ತಿ ನೆರವಿನಿಂದ ಸಿನಿಮಾರಂಗ ಪ್ರವೇಶಿಸಿದರು.