ಅಜೆಂಡಾ ಭರಿತ ಅಕ್ಷರವನ್ನು ಅವಲೋಕಿಸದೆ ಅನುಸರಿಸುವುದು ಅಕ್ಷರಶಃ ಆತ್ಮಹತ್ಯೆ!: ದುರ್ಗಾ ಬರೆದ ಬರಹ

ದುರ್ಗಾ

ಅಂ

 

ತರ್ಜಾಲ ಎಂಬ ವಿಸ್ಮಯವೊಂದು ಮನುಕುಲಕ್ಕೆ ಪಸರಿಸಿದ ನಂತರ ಜಗತ್ತು ಹಿಂದೆಂದೂ ಕಾಣದಷ್ಟು ಸಾಹಿತಿಗಳು, ಕವಿಗಳು, ಪ್ರೇರಕವಾಕ್ಯ ರಚನಕಾರರು, ವಿಮರ್ಶಕರು, ಟೀಕಾಕಾರರನ್ನು ಸೃಷ್ಟಿಸಿದ್ದು ಮತ್ತು ಅವರೆಲ್ಲರಿಗೂ ಖರ್ಚಿಲ್ಲದೆ ವೇದಿಕೆ ಒದಗಿಸಿಕೊಟ್ಟಿದ್ದು ಈ ಸಾಮಾಜಿಕ ಜಾಲತಾಣಗಳು! ಅಷ್ಟರಮಟ್ಟಿಗೆ ಜಾಲತಾಣಗಳ ಜನ್ಮ ನಿಜಕ್ಕೂ ತೃಪ್ತಿಕರ.

ಇಂದು ಸೋಶಿಯಲ್ ಮೀಡಿಯ ಬಳಸುತ್ತಿರುವ ಎಲ್ಲರೂ ಕನಿಷ್ಠ ಅಕ್ಷರ ಟೈಪಿಸುವಷ್ಠಾದರೂ ವಿದ್ಯಾವಂತರೇ! ಹಾಗಾಗಿ ಇಲ್ಲಿ ಬರಹದ ವ್ಯಸನ ಹೊಂದಿರುವ ವರ್ಗವೊಂದು ಬಹು ದೊಡ್ಡ ಸಂಖ್ಯೆಯಲ್ಲಿದೆ. ಚುಟುಕಾದ ಪೋಸ್ಟುಗಳು ಮತ್ತು ವಿಶಾಲವಾದ ಕಮೆಂಟುಗಳೂ ಸೇರಿ! ಹಾಗೆ ನೋಡಿದರೆ ಇಲ್ಲಿ ‘ಓದುಗರೇ’ ಅಲ್ಪ ಸಂಖ್ಯಾತರು. ಅಕ್ಷರ ಬಲ್ಲ ವರ್ಗ ಬಹುಸಂಖ್ಯಾತವಾಗಿದೆ ಅನುಮಾನವಿಲ್ಲ ಹಾಗೆಂದು ಈ ವರ್ಗದ ಎಲ್ಲರೂ ವಿವೇಕಿಗಳೂ,ತರ್ಕಬದ್ದರೂ ಆಗಿರಬೇಕೆಂದೇನಿಲ್ಲವಲ್ಲ.

Of cource ಅಕ್ಷರಕ್ಕೆ ಅಸ್ಪರ್ಶತೆಯಿಲ್ಲ.!
ಪುಟ್ಟ ಖುಷಿ,ಡವಗುಡಿಸುವ ದುಗುಡ, ಅಂತರಾಳದ ಆತಂಕ, ಈಗತಾನೆ ಕಂಡ ರೋಚಕತೆ ಇಂತಹ ಅನೇಕ ಭಾವನೆಗಳನ್ನು ಅಕ್ಷರದ ಮೂಲಕ ಚಕ್ಕನೆ ಟೈಪಿಸಿ ಜಗತ್ತಿಗೆ ಹಂಚಿಕೊಳ್ಳುವು ಬಗೆ ಇಷ್ಟು ವೈಶಾಲ್ಯವಾಗಿ ಹಿಂದ್ಯಾವ ಜನಾಂಗಕ್ಕೂ ಸಿಗದ ಅದಮ್ಯ ಅಚ್ಚರಿ ಮತ್ತು ಅದೃಷ್ಟ!

ಆದರೆ ಕೆಲವೊಂದಷ್ಟು ಅತಿ ಸೂಕ್ಷ್ಮ ವಿಷಯಗಳಿವೆ. ಇನ್ನೊಬ್ಬರ ಭಾವನೆಗಳಿಗೆ HURT ಮಾಡುವಂತಹ, ಸಮೂಹಗಳ ಮದ್ಯೆ ಆತಂಕ-ಅನುಮಾನ ಹುಟ್ಟಿಸಿ ಕ್ಷಣಾರ್ಧದಲ್ಲಿ ದ್ವೇಷ ಹರಡಿಸುವಂತಹ ಗಂಭೀರ ವಿಷಯಗಳು.

ಅವುಗಳನ್ನು ತಾಕಲು ಒಂದಷ್ಟು HOMEWORK ನ ಹಿನ್ನೆಲೆ , ಸರಿ ತಪ್ಪುಗಳ ವಿವೇಚನೆ , ಇತಿಹಾಸದ ಅನುಭವ, ಭವಿಷ್ಯದ ಪರಿಣಾಮ ಎಲ್ಲದರ ಸಮಗ್ರ ದೃಷ್ಟಿಕೋನವೊಂದು ಅತ್ಯಂತ ಅಗತ್ಯವಾಗಿ ಇರಬೇಕಾಗುತ್ತದೆ. ಇವ್ಯಾವವೂ ಇಲ್ಲದ ವಿವೇಚನೆ ರಹಿತ ಪೋಸ್ಟುಗಳು ವಿನಾಕಾರಣ ವಿಷ ಹರಡುವುದಂತೂ ಇವೇ ಅಕ್ಷರ ಕಕ್ಕುವ ಎಕ್ಸಿಟ್ಮೆಂಟ್ ನಿಂದಲೇ!

ಇವುಗಳ ಜೊತೆಗೆ ಇನ್ನೊಂದಿದೆ ಬರವಣಿಗೆಯ HATE CRIME!! ಇದು ಉದ್ದೇಶ ಪೂರ್ವಕ ವ್ಯಸನ!
ಎಲ್ಲೋ ಎಂದೋ ಕೇಳಿದ / ಓದಿದ ಸೈದ್ಧಾಂತಿಕಭಿನ್ನಾಭಿಪ್ರಾಯದ ಒಂದೆರಡು ಸಾಲುಗಳನ್ನಿಡಿಕೊಂಡು ಅದರೊಂದಿಗೆ ಇವರದೇ ಅದ ಇನ್ನೊಂದಷ್ಟು ಅಸಂಬದ್ಧ ಹೊಲಸು ಸೇರಿಸಿಕೊಂಡು ರಾಡಿ ಸೇರಿಸಿ ಸಮಾಜದ ಮೇಲೆ ಎರಚುವ ವರ್ಗ. ಇವುಗಳ ಮೂಲ ನೀರಿಕ್ಷೆ ಅರ್ಥಪೂರ್ಣ ಚರ್ಚೆಯಲ್ಲ, ಬದಲಾಗಿ ಕೇವಲ ದ್ವೇಷ ಹಂಚುವುದು ಮತ್ತು ಸಾಮುದಾಯಿಕವಾಗಿ ಹೊಡೆದಾಡುವಂತೆ ಪ್ರಚೋದಿಸುವುದು ಅದರ ಮೂಲಕ ತಾನು ಚಾಲ್ತಿಯಲ್ಲಿರುವುದು!

ಇಂದು ಕಾಣುತ್ತಿರುವ ವಿವಿಧ ವರ್ಗಗಳ ಕಾರಣವಿಲ್ಲದ ಆತಂಕ ಮತ್ತು ದ್ವೇಷಕ್ಕೆ ಇಂತಹ ವಿಷ ಸುರಿಯುವ ವರ್ಗಗಳ ಕೊಡುಗೆ ಅತಿದೊಡ್ಡ ಪ್ರಮಾಣದಲ್ಲಿದೆ! ಅಕ್ಷರ ಮೂಲಕ ಅಸಹ್ಯ ಕಾರುವ ಮೂಲ ಇವರಿರಬಹುದು ಆದರೆ ಇದರ ಪರಿಣಾಮವನ್ನು ಅನುಭವಿಸುತ್ತಿರುವವರು ಇವರನ್ನು ಅಂಧವಾಗಿ ಅನುಸರಿಸುವ ಮೌಢ್ಯತುಂಬಿರುವ ಶಿಕ್ಷಿತ ಮುಗ್ದರು! ಓದು ಬುದ್ದಿ ಹೆಚ್ಚಿಸುತ್ತದೆ ಎಂಬ ಶತಮಾನದಷ್ಟು ಪುರಾತನ ಅಪ್ರಸ್ತುತ ಹೇಳಿಕೆ ನಮ್ಮೊಳಗೇ ಬೆಳೆದು ಬಂದಿರುವ ಕಾರಣ ಬರಹದ ಮೂಲಕ ಬಂದಂತಹ ಬಹುತೇಕ ಮಾಹಿತಿಯನ್ನು ಇಂದಿಗೂ ಜನ ಕಣ್ಮುಚ್ಚಿ ನಂಬುತ್ತಾರೆ.

ಜಾಲತಾಣಗಳಲ್ಲಿ ಪುಕ್ಕಟೆ ಸಿಕ್ಕುವ ಇಂತಹ ಬರಹಗಳನ್ನು ಕೇವಲ ಹತ್ತೆಹತ್ತು ನಿಮಿಷ ಓದಿದ ನಂತರ ಒಳಗೆಲ್ಲೊ ಸಹಜವಾಗಿ ಹುಟ್ಟುವ ‘ಓದಿದೆ’ ಎಂಬ ತೃಪ್ತಿ ಮತ್ತು ಮಾಹಿತಿಗಳಿಸಿದ ಅಕ್ಷರದ ಅಹಂ, ವಿಷಯದ ಹಿಂದಿರುವ ಗುಪ್ತ ಉದ್ದೇಶವನ್ನು ಗ್ರಹಿಸಲು ಸಾಧ್ಯವಿರದ ಮುಗ್ದ ಶಿಕ್ಷಿತರನ್ನು ಅದನ್ನು ಲಾಜಿಕಲಿ ಅಲೋಚಿಸುವ ಅವಕಾಶವನ್ನೂ ನೀಡದಂತೆ ತನ್ನನ್ನು ತಾನೇ ಪ್ರಶ್ನಾತೀತ ಬುದ್ದಿವಂತನೆಂದು ಭ್ರಮಿಸುವ ಭ್ರಮಾಲೋಕವೊಂದಕ್ಕೆ ನೂಕುತ್ತದೆ.

ಹೀಗೆ ಭ್ರಮಾಲೋಕದಲ್ಲಿರುವ ಪ್ರಜ್ಞಾಹೀನ ಸಮಾಜವೊಂದು ಈಗಾಗಲೇ ಸೃಷ್ಠಿಯಾಗಿ ಅದರ ಪರಿಣಾಮವನ್ನು ನಾವು ಅನುಭವಿಸಿಯೂ ಆಗಿದೆ!

ಮೆಚ್ಚಲೇಬೇಕಾದ ವ್ಯಂಗ್ಯವೆಂದರೆ ಇಂತಹ hate crime ಉದ್ದೇಶಗಳನ್ನೊಳಗೊಂಡ ಸಾಹಿತ್ಯಗಳು ರಸಹೀನವಂತೂ ಅಲ್ಲ. ಅಲ್ಲಿ ನಿಜವಾಗಿಯೂ ಸೃಜನಶೀಲತೆಯಿದೆ. ಪದಗಳ ಪೋಣಿಸಿ ಪಂಚ್ ಲೈನ್ ಒಂದನ್ನು ಸಿಕ್ಕಿಸಿ ಚೆಂದಗೆ ಸಿಂಗರಿಸಿ ಪ್ರೆಸೆಂಟ್ ಮಾಡುವ ಕೌಶಲ್ಯವಿದೆ, ಸಗಣಿಯನ್ನು ಶರಬತ್ತಿನೊಂದಿಗೆ ಬೆರೆಸಿ ಕುಡಿಸಬಲ್ಲಂತಹ ಕರ್ಮಠ ಕೌಶಲ್ಯ!

ಇವರೇ ಖುದ್ದು ಕುಳಿತು ಅಗೋಚರ ವಿರೋಧಿಗಳನ್ನು ಸೃಷ್ಟಿಸಿಕೊಂಡು ಅವರ ಮೂಲಕ ಬಂದಿರುವಂತೆ ಪ್ರಚೋದಕವಾದ, ಒದೆತಿನ್ನಲಿಕ್ಕೆಂದೇ ರಚನೆಯಾದ ಜೊಳ್ಳಿಲ್ಲದ ಕಾಲ್ಪನಿಕ ಪ್ರಶ್ನೆಯೊಂದನ್ನು ರಚಿಸಿಕೊಂಡು, ಆ ಪ್ರಶ್ನೆಗೆ ಅವರೇ ಪಂಚ್ ಪಂಚ್ ಎನ್ನುವ ಉತ್ತರ ಕೊಟ್ಟು ಹಾಕುವ ಒಂದಷ್ಟು ಪೋಸ್ಟುಲಂತೂ ನಿಜಕ್ಕೂ young generation ಹುಡುಗರನ್ನು ಆಕರ್ಷಿಸುವ ಅತ್ಯಂತ ರುಚಿಕರವಾದ ಪಾಷಾಣ!

ಇಂತಹ ಪೂರ್ವ ನಿಯೋಜಿತ ಉದ್ದೇಶ ತುಂಬಿದ ಪಂಚ್ ಲೈನನ್ನು ಅರ್ಥೈಸಿಕೊಳ್ಳದೆಯೇ ಇನ್ನೊಬ್ಬರ ಮುಂದೆ ಪ್ರದರ್ಶಿಸಿ ಬುದ್ದಿವಂತರೆಂದೆನಿಸಿಕೊಳ್ಳುವ ಬಾಲಿಶ ಪ್ರಯತ್ನದಲ್ಲಿ ಕಂಡ ಕಂಡಲ್ಲಿ ಕಕ್ಕಿಕೊಂಡು ಅಲೆಯುವ ವ್ಯಾಕುಲವಾದಿಗಳ ಸಂಖ್ಯೆ ಸಾಮಾಜಿಕಜಾಲತಾಣಗಳಲ್ಲಿ ವೃದ್ಧಿಸಿದ್ದು ಸಾಮಾಜಿಕ ಶೋಚನೀಯ ಸಂಗತಿ. ರಾಜಕೀಯಕ್ಕೆ, ಧರ್ಮಕ್ಕೆ, ಸಂಘಟನೆಗಳಿಗೆ ಪೂರಕವಾಗುವಂತಹ ಅಜೆಂಡಾ ಹರಡುವ ಕಾರ್ಯಕರ್ತರ ಪ್ರಶಸ್ತ ಅವಕಾಶವೇ ಈ ಸಾಹಿತ್ಯದ ಸ್ವರತಿ ಸುಖಿಸುವ ಮಾಗಿರದ ಮುಗ್ಧ ಮನಸ್ಸುಗಳು.

ವಿಷ ಸಾಹಿತ್ಯಿಕ ಮಾದಕತೆಯನ್ನು ಚಿಗುರುವ ವಯಸ್ಸಿನಲ್ಲಿ ಅರಿವಿಲ್ಲದೆ ಸಂಭ್ರಮಿಸುತ್ತ, ತನ್ನನ್ನು ಅದರೊಂದಿಗೆ ಗುರುತಿಸಿ ಕೊಂಡ ಹುಡುಗರು ಮುಂದೆ ತಾನೊಬ್ಬ ವಿಚಾರ ಸ್ವಂತಿಕೆಯಿರುವ ಸ್ವತಂತ್ರ ಪ್ರಜೆ ಎಂಬುದನ್ನೇ ಮರೆತು ಸುಲಭಕ್ಕೆ ತಲೆಮಾಸಿದ ಯಾವುದಾದರೂ ಪಂಥದ ಕತ್ತಲೆಯ ಗೋಡಾನಿನಲ್ಲಿ ಮತ್ತೆಂದಿಗೂ ಹೊರಬಾರದಂತೆ ಮುಳುಗಿಹೋಗುತ್ತವೆ.

ಅಕ್ಷರದ ಪ್ರಭಾವ ಅಂತದ್ದು!

ಅದರಲ್ಲೂ ಧರ್ಮ ರಾಜಕೀಯದ ಬಗೆಗಿನ ವಿಚಾರಗಳಂತೂ ಉಮೇದು ಸೃಷ್ಟಿಸುವ, ಒಳಗಿರುವ ದುರ್ಬಲತೆಯನ್ನು ಮುಚ್ಚಿಟ್ಟು ಅಹಂ ತೃಪ್ತಿಪಡಿಸಿ ಮುದವಾಗಿ ಮದವೇರಿಸಿ ತೇಲಿಸುವಷ್ಟು ಬಲಶಾಲಿ! ಅಲ್ಲಿ ವಾಸ್ತವವಾಗಿ ತರ್ಕವೆನ್ನುವುದು ತಳಬಿಡದೆ ತಡಕಿದರು ಕಿಂಚಿತ್ತೂ ಕಾಣದು. ಆದರೂ ಅವು ಹೆಚ್ಚು ಹೆಚ್ಚು ಆಕರ್ಷಕ ಸಾಹಿತ್ಯ!

ಅಕ್ಷರ- ಓದು ಇವು ಎಂದಿಗೂ ಬುದ್ದಿವಂತರನ್ನು ಸೃಷ್ಟಿಸುವುದೂ ಇಲ್ಲ, ಬುದ್ದಿವಂತಿಕೆಯನ್ನು ಏರಿಸುವುದೂ ಇಲ್ಲ, ಅದು ಕೇವಲ ಮೆದುಳಿನ ತಾರ್ಕಿಕ ಚಿಂತನಾ ಶಕ್ತಿಯನ್ನು ಹೆಚ್ಚಿಸುತ್ತದಷ್ಟೇ. ಅದೂ ಸಹ ಮೆದುಳೆನ್ನುವ ಮಾಂಸದ ಮುದ್ದೆ ಕನಿಷ್ಠ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿದ್ದರೆ ಮಾತ್ರ. ಸಾಹಿತ್ಯ ಎಂಬುದು ಎಂದಿಗೂ ಸಿದ್ಧಪಡಿಸಿಟ್ಟ ಶಾಸನಗಳಲ್ಲ ಅವು ಕೇವಲ ಇನ್ನೊಬ್ಬರ ಅನುಭವ ಮತ್ತು ಆಲೋಚನೆಯ ದಾಖಲಿತ ಸಂವಹನವಷ್ಟೇ.

ಲೇಖನಿ ಖಡ್ಗಕ್ಕಿಂತ ಹರಿತ ನಿಜ! ಆದರೆ ಯಾರೋ ಎಸೆದ ಅಜೆಂಡಾ ಭರಿತ ಅಕ್ಷರವನ್ನು ಅವಲೋಕಿಸದೆ ಅವಿವೇಕಿಯಂತೆ ಅನುಸರಿಸುವುದು ಅಕ್ಷರಶಃ ಆತ್ಮಹತ್ಯೆ!