ಉಡುಪಿ: ಇಲ್ಲಿನ ರಥಬೀದಿಯ ಕನಕ ಗೋಪುರ ತ್ರಿವರ್ಣಗಳಿಂದ ಝಗಮಗಿಸುತ್ತಿದೆ. ರಾಷ್ಟ್ರಧ್ವಜದ ಮೂರು ಬಣ್ಣಗಳಾದ ಕೇಸರಿ, ಬಿಳಿ ಮತ್ತು ಹಸಿರು ವರ್ಣದಲ್ಲಿ ಶೋಭಿಸುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಪರ್ಯಾಯ ಕೃಷ್ಣಾಪುರ ಶ್ರೀಕೃಷ್ಣ ಮಠ ಆಶ್ರಯದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯ ನೇತೃತ್ವದಲ್ಲಿ ಪಂಚಮಿ ಟ್ರಸ್ಟ್ ಮತ್ತು ಗಾಂಧಿ ಹಾಸ್ಪಿಟಲ್ ಸಹಯೋಗದೊಂದಿಗೆ ಕೃಷ್ಣ ಮಠದ ಕನಕ ಗೋಪುರ ತ್ರಿವರ್ಣದೊಂದಿಗೆ ಝಗಮಗಿಸುವಂತೆ ಮಾಡಲಾಗಿದ್ದು, ಶನಿವಾರದಿಂದ ಸೋಮವಾರ ವರೆಗೆ ಪ್ರತಿದಿನ ಸಂಜೆ 6.30ರಿಂದ ರಾತ್ರಿ 10ರ ವರೆಗೆ ವಿಶೇಷ ವಿದ್ಯುದ್ದೀಪಗಳ ಶೃಂಗಾರದಿಂದ ಕಂಗೊಳಿಸಲಿದೆ.
ಕನಕ ಗೋಪುರದ ದೀಪಾಲಂಕಾರವನ್ನು ಶನಿವಾರ ಉದ್ಘಾಟಿಸಲಾಗಿದ್ದು, ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಸ್ವಿಚ್ ಆನ್ ಮಾಡುವ ಮೂಲಕ ತ್ರಿವರ್ಣ ದೀಪಾಲಂಕಾರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗಾಂಧಿ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ, ನಗರಸಭಾ ಸದಸ್ಯ ವಿಜಯ ಕೊಡವೂರು, ರೋಟರಿ ಉಡುಪಿ ರಾಯಲ್ ಅಧ್ಯಕ್ಷ ಪ್ರೊ. ಬಾಲಕೃಷ್ಣ ಮದ್ದೋಡಿ, ಕಾರ್ಯಕ್ರಮ ಸಂಚಾಲಕ ಆಸ್ಟ್ರೋ ಮೋಹನ್, ಉಪಾಧ್ಯಕ್ಷ ಪ್ರವೀಣ್ ಹೂಡೆ, ಕಸಾಪ ಉಡುಪಿ ತಾಲೂಕು ಘಟಕಾಧ್ಯಕ್ಷ ರವಿರಾಜ್ ಹೆಚ್.ಪಿ ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳು ಮೊದಲಾದವರಿದ್ದರು.
ಈ ಸಂದರ್ಭದಲ್ಲಿ ಮಾಜಿ ಯೋಧ ಕೃಷ್ಣ ಶೆಟ್ಟಿಬೆಟ್ಟು ಇವರನ್ನು ಅಭಿನಂದಿಸಲಾಯಿತು. ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯ ಅಧ್ಯಕ್ಷ ಜನಾರ್ದನ ಕೊಡವೂರು ಸ್ವಾಗತಿಸಿದರು. ದಿವಾಕರ್ ಹಿರಿಯಡ್ಕ ವಂದಿಸಿದರು. ಪೂರ್ಣಿಮಾ ಜನಾರ್ದನ್ ನಿರೂಪಿಸಿದರು.