ಇತಿಹಾಸದಲ್ಲೆ ಮೊದಲ ಬಾರಿ ಬೆಂಗಳೂರಿನಲ್ಲಿ ನಡೆಯಲಿದೆ ಕಂಬಳ..!

ಬೆಂಗಳೂರು: ಬೆಂಗಳೂರಿನಲ್ಲಿ ಕಂಬಳದ ಇತಿಹಾಸದಲ್ಲಿ ಮೊದಲ ಬಾರಿಗೆ, ರಾಜ ಮಹಾರಾಜ ಜಯ ಚಾಮರಾಜೇಂದ್ರ ಒಡೆಯರ್ ಜೋಡುಕೆರೆ ಕಂಬಳ ನಡೆಯಲಿದ್ದು, ತುಳುನಾಡಿನ ಕಂಬಳದ ಕೋಣಗಳು ಬೆಂಗಳೂರಿನ ಕಡೆಗೆ ಹೊರಡಲಿದೆ.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ನಡೆಯಲಿರುವ ಈ ಕಂಬಳಕ್ಕೆ ಮೈಸೂರು ಅರಸರಿಂದ ಅನುಮತಿ ದೊರೆತಿದೆ.

ಕರಾವಳಿ ಕರ್ನಾಟಕದ ಬೇಸಾಯ ವೃತ್ತಿಯೇ ಪ್ರಮುಖವಾಗಿರುವ ಸಮಾಜದಲ್ಲಿ ಕೋಣಗಳು ಅವರ ಬದುಕಿನ ಅವಿಭಾಜ್ಯ ಅಂಗ. ‘ಕಂಬಳ, ಬೇಸಾಯಗಾರರು ಭತ್ತದ ಗದ್ದೆಗಳಲ್ಲಿ ಕೊಯ್ಲಿನ ಬಳಿಕ ಕೋಣಗಳನ್ನು ಓಡಿಸುತ್ತಿದ್ದ ಆಚರಣೆ ಮತ್ತು ಆಟವಷ್ಟೇ ಆಗದೇ ಅದರೊಂದಿಗೆ ಇಂತಹಾ ಆಚರಣೆಯ ಜತೆಗೆ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಿಕ ನಂಬಿಕೆಯೂ ಮಿಳಿತಗೊಂಡಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಜನಪ್ರಿಯವಾಗಿರುವ ಈ ಕಂಬಳ ರೈತಾಪಿ ವರ್ಗದವರು ಭತ್ತದ ಕೊಯಿಲಿನ ನಂತರ ಮನೋರಂಜನೆಗೋಸ್ಕರ ಏರ್ಪಡಿಸುತ್ತಿದ್ದ ಕ್ರೀಡೆ. ಕಾರ್ತಿಕ ಮಾಸದ ದೀಪಾವಳಿ ಹಬ್ಬದ ನಂತರ ಚಳಿಗಾಲದಲ್ಲಿ ಆರಂಭವಾಗುವ ಈ ಜಾನಪದ ಕ್ರೀಡೆಯನ್ನು ಮಾರ್ಚ್ ತಿಂಗಳವರೆಗೂ ಅವಳಿ ಜಿಲ್ಲೆಯ ವಿವಿಧ ಭಾಗದಲ್ಲಿ ಆಯೋಜಿಸಲಾಗುತ್ತದೆ.
ಕೋಣಗಳನ್ನು ವೇಗವಾಗಿ ಓಡಿಸುವ ಉದ್ದೇಶದಿಂದ ನಾಗರ ಬೆತ್ತಗಳಿಂದ ಅವುಗಳಿಗೆ ಹೊಡೆಯುವುದು ಸಾಮಾನ್ಯ ಈ ಕಾರಣಕ್ಕಾಗಿ ಕಂಬಳವನ್ನು ಪ್ರಾಣಿ ಹಿಂಸೆ ಎಂದು ಅನೇಕರು ದೂಷಿಸುತ್ತಾರೆ ಹಾಗೂ ಈ ಕ್ರೀಡೆಯನ್ನು ನಿಷೇಧಿಸಬೇಕೆನ್ನುವ ಕೂಗು ಕೇಳಿ ಬಂದದ್ದೂ ಇದೆ. ಆದರೆ ಏಟು ಹೊಡೆದರೂ ಸ್ಪರ್ಧೆಯ ಕೊನೆಗೊಂಡ ನಂತರ ಅವುಗಳನ್ನು ಚೆನ್ನಾಗಿ ಆರೈಕೆ ಮಾಡಲಾಗುತ್ತದೆ ಎಂಬ ಯಜಮಾನರುಗಳ ಹೇಳಿಕೆಯು ಕಂಬಳವು ಇನ್ನು ಚಾಲ್ತಿಯಲ್ಲಿರುವುದಕ್ಕೆ ಕಾರಣವಾಗಿದೆ.