ಉಡುಪಿ: ಕಂಬಳ ಒಟಗಾರ ಸುರೇಶ್ ಕಡಿನತಾರು (37)ಫೆ.9 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋರ್ಟ್ ಪ್ರೋಸೆಸ್ ಹುದ್ದೆಯಲ್ಲಿದ್ದ ಅವರು ಪ್ರಸ್ತುತ ಅಮಾನುತುಗೊಂಡಿದ್ದರು. ಇದರಿಂದ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಶಿರೂರು ಟೋಲ್‌ಗೇಟ್ ಬಳಿ ನಿವಾಸಿಯಾಗಿದ್ದ ಸುರೇಶ್ ಶಿರೂರಿನ ತನ್ನ ಪತ್ನಿ ಮನೆಯಲ್ಲಿ ಫೆ.9ರಂದು ಮಧ್ಯಾಹ್ನ ಊಟ ಮುಗಿಸಿ ಮಲಗಿದ್ದು ಸಂಜೆ ಮನೆಯಿಂದ ಹೊರಬಂದಿದ್ದು ಆ ಬಳಿಕ ಪತ್ನಿ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದಾರೆ. ಅದರಲ್ಲಿ ‘ಸಾರಿ ಸಾರಿ ಸಾರಿ, ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಮನೆಯವರು ನಿನಗೆ ರಗಳೆ ಮಾಡಬಹುದು. ಅವರಿಗೆಲ್ಲ ಈ ಮೇಸೆಜ್ ತೋರಿಸು. ನನಗೆ ಕೆಲಸ ಆಗಲಿಲ್ಲ. ಅದೇ ತಲೆಬಿಸಿಯಲ್ಲಿ ತಪ್ಪು ಮಾಡುತ್ತಿದ್ದೇನೆ. ನನ್ನಿಂದ ಈ ತರಹ ಹೇಡಿ ಹಾಗೆ ಬದುಕಲು ಆಗುವುದಿಲ್ಲ. ನಾನು ಸಾಯುತ್ತಿದ್ದೇನೆ. ಗೇರು ಮರಕ್ಕೆ ನೇಣು ಹಾಕಿಕೊಳ್ಳುತ್ತಿದ್ದೇನೆ ಬೇರೆ ಎಲ್ಲೂ ಹುಡುಕುವುದು ಬೇಡ’ ಎಂದು ಬರೆದಿದ್ದಾರೆ ಎನ್ನಲಾಗಿದೆ.
ಸಂದೇಶ ತಲುಪಿದ ತಕ್ಷಣ ಸಂಬಂಧಿಕರು ಹುಡುಕಾಟ ಆರಂಭಿಸಿದ್ದು, ಟೋಲ್‌ಗೇಟ್ ಹಿಂಬದಿಯ ಸರಕಾರಿ ಹಾಡಿಯಲ್ಲಿ ಸುರೇಶ್ ಅವರ ಮೃತದೇಹವು ಗೇರು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸುರೇಶ ಪೂಜಾರಿ ವಿರುದ್ದ ಕಳೆದ ವರ್ಷ ವ್ಯಕ್ತಿಯೊಬ್ಬರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರಿಂದ ಸುರೇಶ್ ನಿರ್ವಹಿಸುತ್ತಿದ್ದ ಕೋರ್ಟ್ ಪ್ರೋಸೆಸ್ ಕೆಲಸದಿಂದ ಅಮಾನತಾಗಿದ್ದು ಈವರೆಗೆ ಕೆಲಸಕ್ಕೆ ಮತ್ತೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ನಿತ್ಯ ಅಲೆದಾಟ ಮಾಡುತ್ತಿದ್ದು, ಕೆಲಸವಿಲ್ಲದ ಚಿಂತೆಯಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರೇಶ್ ಕಂಬಳದ ಪ್ರೋತ್ಸಾಹಕ, ಸಂಘಟಕ, ಕಂಬಳದ ಹಗ್ಗದ ವಿಭಾಗದ ಓಟಗಾರರಾಗಿದ್ದರು. ಅಲ್ಲದೆ ಇತ್ತೀಚೆಗೆ ಕಂಬಳದಲ್ಲಿ ಓಟದ ಮಾಪನ ಮಾಡುವ ಸುಧಾರಿತ ಸೆನ್ಸಾರ್ ಯಂತ್ರವನ್ನು ನಿರ್ವಹಿಸುತ್ತಿದ್ದರು. ಕ್ರಿಯಾಶೀಲ ವ್ಯಕ್ತಿಯಾಗಿದ್ದ ಸುರೇಶ್ ಸ್ನೇಹಜೀವಿಯಾಗಿ ಗುರುತಿಸಿಕೊಂಡಿದ್ದರು.
ಮೃತರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
















