ಕಮಲಾಕ್ಷಿ ಸಹಕಾರಿ ಸಂಘ ಬಹುಕೋಟಿ ಹಗರಣ: ಸೊಸೈಟಿ ಅಧ್ಯಕ್ಷರಿಗೆ ಜ.11ರವರೆಗೆ ನ್ಯಾಯಾಂಗ ಬಂಧನ

ಉಡುಪಿ: ಸುಮಾರು 100 ಕೋಟಿ ರೂಪಾಯಿಗೂ ಮಿಕ್ಕಿ ವಂಚನೆ ನಡೆದಿದೆ ಎನ್ನಲಾದ ಕಮಲಾಕ್ಷಿ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಬಿ ವಿ ಲಕ್ಷ್ಮೀನಾರಾಯಣ ಅವರನ್ನು ಉಡುಪಿ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಹಗರಣ ಪ್ರಕರಣ ಬೆಳಕಿಗೆ ಬಂದಾಗಿನಿಂದ ತಲೆಮರೆಸಿಕೊಂಡಿದ್ದ ಇವರನ್ನು ಪತ್ತೆ ಹಚ್ಚುವಲ್ಲಿ ಸೆನ್ ಪೊಲೀಸರು ಬ್ರಹ್ಮಾವರ ಸಮೀಪದ ಮಟಪಾಡಿ ಬಳಿ ಬಂಧಿಸಿದ್ದಾರೆ. ಇವರ ಮೇಲೆ ವಂಚನೆ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗದ ಮುಂದೆ ಹಾಜರು ಪಡಿಸಲಾಗಿದೆ.

ಉಡುಪಿ ಜೆಎಂಎಫ್‌ಸಿ ನ್ಯಾಯಾಲಯವು ಲಕ್ಷ್ಮೀನಾರಾಯಣ ಅವರನ್ನು 2023ರ ಜನವರಿ 11ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಲಕ್ಷ್ಮೀನಾರಾಯಣ ಈಗಾಗಲೇ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದು, ಜನವರಿ 2, 2023 ರಂದು ಇದರ ವಿಚಾರಣೆ ನಡೆಯಲಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಲಕ್ಷ್ಮೀನಾರಾಯಣ ಪರ ವಕೀಲ ಮಿತ್ರಕುಮಾರ್ ಶೆಟ್ಟಿ, ಕೋವಿಡ್‌ನಿಂದಾಗಿ ಲಕ್ಷ್ಮೀನಾರಾಯಣ ಆರ್ಥಿಕ ಸಂಕಷ್ಟ ಎದುರಿಸಿದ್ದರು.ದೊಡ್ಡ ಮೊತ್ತದ ಸಾಲ ವಸೂಲಾತಿಯೂ ಬಾಕಿ ಇದೆ. ಸಾಲದ ಮೊತ್ತ ವಸೂಲಿಯಾಗದ ಕಾರಣ ಸಹಕಾರಿ ಸಂಘ ಸಮಸ್ಯೆ ಎದುರಿಸುತ್ತಿದೆ. ಗ್ರಾಹಕರು ತಮ್ಮ ಹಣದ ಬಗ್ಗೆ ಚಿಂತಿಸಬೇಕಾಗಿಲ್ಲ. ಪ್ರತಿಯೊಬ್ಬರ ಹಣವೂ ಸುರಕ್ಷಿತವಾಗಿದೆ, ಅಗತ್ಯ ಬಿದ್ದರೆ ಸ್ವಂತ ಆಸ್ತಿಯನ್ನು ಮಾರಿ ಗ್ರಾಹಕರಿಗೆ ಹಣ ವಾಪಸ್ ನೀಡಲು ಸಿದ್ಧ ಎಂದು ಲಕ್ಷ್ಮೀನಾರಾಯಣ ಹೇಳಿದ್ದಾರೆ ಎಂದು ಅವರು ಹೇಳಿದರು.

ಕಮಲಾಕ್ಷಿ ವಿವಿದೋದ್ದೇಶ ಸಹಕಾರಿ ಸಂಘದಲ್ಲಿ ಸುಮಾರು 600 ಠೇವಣಿದಾರರ 93 ಕೋಟಿ ರುಪಾಯಿ ವಂಚನೆ ನಡೆದಿರುವ ಆರೋಪವಿದೆ. ಕಳೆದ ಕೆಳವು ತಿಂಗಳಿಂದ ಅವರಿಗೆ ಸೊಸೈಟಿಯು ತನ್ನ ಗ್ರಾಹಕರಿಗೆ ಬಡ್ಡಿ ನೀಡದೆ ಸತಾಯಿಸಲಾಗುತ್ತಿತ್ತು. ಇದರಿಂದ ಕೆರಳಿದ್ದ ಗ್ರಾಹಕರು ಸೊಸೈಟಿಗೆ ಮುತ್ತಿಗೆ ಹಾಕಿ ಅಲ್ಲಿನ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆ ಸಂದರ್ಭದಲ್ಲಿ ಅಧ್ಯಕ್ಷ ನಾಪತ್ತೆಯಾಗಿದ್ದು, ಹಗರಣ ನಡೆದಿರುವ ಬಗ್ಗೆ ವರದಿಯಾಗಿತ್ತು.