ಕಣ್ಮರೆಯಾದನು ಕಂಬಳ ಲೋಕದ ಚಿನ್ನ, ಕೊಳಚೂರು ಕೊಂಡೊಟ್ಟು”ಚೆನ್ನ”: ಅತೀ ಹೆಚ್ಚು ಪ್ರಶಸ್ತಿ ಗೆದ್ದಿದ್ದ ಕಂಬಳ ಪ್ರಿಯರ ಮುದ್ದಿನ ಕೋಣ ಇನ್ನಿಲ್ಲ

ಕಂಬಳ ಕೂಟದ ಅತ್ಯಂತ ಜನಪ್ರಿಯ, ಅತಿ ಹೆಚ್ಚು ಪ್ರಶಸ್ತಿ ವಿಜೇತ ಪಟ್ಟಿಯಲ್ಲಿ ಅಗ್ರಗಣ್ಯ ಎನ್ನಿಸಿಕೊಂಡಿದ್ದ ಕೊಳಚೂರು ಕೊಂಡೊಟ್ಟು ಸುಕುಮಾರ್‌ ಶೆಟ್ಟಿ ಅವರ ʼಚೆನ್ನʼ ಎಂಬ ಹೆಸರಿನ ಕೋಣ ಗುರುವಾರ (ಆ.14) ಅಸುನೀಗಿದೆ. ಸುಮಾರು 25 ವರ್ಷ ಪ್ರಾಯದ ಚೆನ್ನ ಕಳೆದ ಮೂರು ವರ್ಷದಿಂದ ವಿಶ್ರಾಂತಿಯಲ್ಲಿದ್ದ. ಇದೀಗ ವಯೋಸಹಜ ಅನಾರೋಗ್ಯದಿಂದ ಸಾವಿನ ಕದ ತೆರೆದಿದ್ದಾನೆ.  ಗುರುವಾರ ಸಂಜೆ ಚೆನ್ನನ ಅಂತ್ಯಸಂಸ್ಕಾರ ನಡೆಯಲಿದೆ.

ಅತ್ಯಧಿಕ ಪ್ರಶಸ್ತಿಗಳ ಸರದಾರ:

ಸುಮಾರು 22 ವರ್ಷಗಳ ಹಿಂದೆ ಕಡಂದಲೆ ಕಾಳು ಪಾಣಾರ ಅವರ ಹಟ್ಟಿಯಲ್ಲಿದ್ದ ಆ ಕೋಣನ್ನು ಬಾರ್ಕೂರು ಶಾಂತಾರಾಮ ಶೆಟ್ಟಿ ಅವರು ತಮ್ಮಲ್ಲಿಗೆ ಕರೆ ತಂದು ಮುದ್ದಿನಿಂದ ಸಾಕಿದ್ದರು. ಬಳಿಕ ಕಂಬಳಕ್ಕಾಗಿ ಚೆನ್ನನನ್ನು ಅಣಿಗೊಳಿಸಿದ್ದರು. ಮೂಡಬಿದಿರೆಯ ಕೋಟಿ-ಚೆನ್ನಯ ಕಂಬಳದ ಗದ್ದೆಗಳಿದ ಮೊದಲ ಮೂರು ವರ್ಷವೂ ನೇಗಿಲು ಜೂನಿಯರ್‌ ವಿಭಾಗದಲ್ಲಿ ಬಾರ್ಕೂರು ಶಾಂತಾರಾಮ ಶೆಟ್ಟರಿಗೆ ಚೆನ್ನ ಕೋಣ ಮೆಡಲ್‌ ಬಾಚಿಕೊಟ್ಟಿತು. ನಂತರ ಸೀನಿಯರ್‌ ಆಗಿ  ಕೊಳಚೂರು ಕೊಂಡೊಟ್ಟು ಸುಕುಮಾರ ಶೆಟ್ಟರ ಹಟ್ಟಿಗೆ ತೆರಳಿತು ಚೆನ್ನ.ತುಸು ತುಂಟ ಪೋಕುರಿಯ ಕೋಣನಾದ್ದರಿಂದ ಕಂಬಳ ಓಟ ಆರಂಭವಾಗುವ ಸಮಯದಲ್ಲಿಯೂ ಪೋಕರಿ ಮಾಡುತ್ತಿತ್ತು. ಇದೇ ಕಾರಣಕ್ಕೆ ಸೀನಿಯರ್‌ ವಿಭಾಗದಲ್ಲಿ ಒಂದು ವರ್ಷ ನೇಗಿಲು ವಿಭಾಗದಲ್ಲಿ ಚೆನ್ನನನ್ನು ಓಡಿಸಲಾಯಿತು. ಬಳಿಕ  ಬಂಟ್ವಾಳದ ಮಹಾಕಾಳಿಬೆಟ್ಟು ಸೀತಾರಾಮ್‌ ಶೆಟ್ಟಿ ಅವರು ಚೆನ್ನನಿಗೆ ತನ್ನ ಕೋಣದ ಜತೆ ಮಾಡಿದ್ದರು.ಆಗಲೇ ಅಲ್ಲಿಪಾದೆ ವಿನ್ಸೆಂಟ್‌ ಅವರು ಚೆನ್ನನಿಗೆ ಪ್ರೀತಿಯಿಂದ ಆರೈಕೆ ಮಾಡಿ ಕಂಬಳದ ಪಾಠ ಹೇಳಿಕೊಟ್ಟರು.ಅದೇ ವರ್ಷದ ನೇಗಿಲು ಹಿರಿಯ ವಿಭಾಗದಲ್ಲಿ ಚೆನ್ನ ಚಾಂಪಿಯನ್ ಆದ.

ಚೆನ್ನ ನಡೆದದ್ದೇ ಹಾದಿ:

ಬಳಿಕ ಚೆನ್ನ ನಡೆದದ್ದೇ ಹಾದಿ, ಹಗ್ಗ ಹಿರಿಯ ವಿಭಾಗದಲ್ಲಿ ಗೆಂದಬೆಟ್ಟು ಮೋಡೆ ಮತ್ತು ಚೆನ್ನ ಜತೆಯಾಗಿ ಹತ್ತಾರು ಪದಕ ಗೆದ್ದುಕೊಂಡಿತು. ನಾಲ್ಕು ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಬಾಚಿಕೊಂಡಿತು. ಸತತ 13 ವರ್ಷ ಪದಕ ಗೆದ್ದ ಸರದಾರನಾದನು ಚೆನ್ನ, ಸತೀಶ್‌, ಜಯಕರ ಮಡಿವಾಳ ನಕ್ರೆ ಪಲಿಮಾರು ದೇವೆಂದ್ರ ಕೋಟ್ಯಾನ್‌, ಮಾರ್ನಾಡ್‌ ರಾಜೇಶ್‌, ಅಳದಂಗಡಿ ಸತೀಶ್‌, ಶ್ರೀನಿವಾಸ ಗೌಡ ಮುಂತಾದವರು ಚೆನ್ನನ ಹಿಂದೆ ಓಡಿ ಪದಕ ಬಾಚಿಕೊಂಡಿದ್ದಾರೆ. ಅಲ್ಲದೇ ಚೆನ್ನನನ್ನು ಸಾಕಿದ್ದ ಯಜಮಾನ ಮತ್ತು ಅವನನ್ನು ಓಡಿಸಿದ್ದ ನಾಲ್ವರು ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪಡೆದ ಕೀರ್ತಿಗೆ ಪಾತ್ರರಾಗಿದ್ದಾರೆ.

ಯಜಮಾನ ಕೊಳಚೂರು ಕೊಂಡೊಟ್ಟು ಸುಕುಮಾರ್‌ ಶೆಟ್ಟಿ, ಓಟಗಾರರಾದ ಪಲಿಮಾರು ದೇವೆಂದ್ರ ಕೋಟ್ಯಾನ್‌, ನಕ್ರೆ ಜಯಕರ ಮಡಿವಾಳ, ಮಿಜಾರು ಶ್ರೀನಿವಾಸ ಗೌಡ ಮತ್ತು ಸುರೇಶ್‌ ಶೆಟ್ಟಿ ಅವರಿಗೆ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಒಲಿದಿರುವುದು ದೊಡ್ಡ ವಿಶೇಷ.

ಎಲ್ಲರ ಪ್ರೀತಿಯ ಚೆನ್ನ:

ಯಾತ್ತೂ ಇತರ ಕೋಣಗಳಿಗಿಂತ ಒಂದು ಹೆಜ್ಜೆ ಮುಂದೆಯೇ ಇರುತ್ತಿದ್ದ ಚೆನ್ನನೆಂದರೆ ಎಲ್ಲರಿಗೂ ಪ್ರೀತಿಯಿತ್ತು. ಚೆನ್ನನ ಓಟವನ್ನು ಕಾಣಲು ಕಂಬಳ ಅಭಿಮಾನಿಗಳು ಕಾತರಿಸುತ್ತಿದ್ದರು. ಹಾಗಾಗಿ ಚೆನ್ನ ಸಾರ್ವಕಾಲಿಕ ಪದಕ ವಿಜೇತರ ಪಟ್ಟಿಯಲ್ಲಿ ಎರಡನೇ ಸ್ಥಾನಿ. ಕಂಬಳದ ಇತಿಹಾಸದಲ್ಲಿ ಎಂದೆಂದಿಗೂ ಅಜರಾಮರವಾಗಿರುವ ದಾಖಲೆಯ ಚೆನ್ನನೀತ. ಇದೀಗ ಚೆನ್ನ ಈ ಲೋಕದಿಂದ ಕಣ್ಮರೆಯಾಗಿದ್ದಾನೆ. ಆದರೆ ಕಂಬಳಾಭಿಮಾನಿಗಳ ಹೃದಯದಲ್ಲಿ ಆತ ಎಂದಿಗೂ ಮರೆಯಾಗುವುದಿಲ್ಲ.