ಮಾರುಕಟ್ಟೆಗೆ ಬರಲು ರೆಡಿಯಾಗಿದೆ ಕಲ್ಪರಸ: ಇದು ಎಳನೀರಿಗಿಂತ ಮೂರು ಪಟ್ಟು ಆರೋಗ್ಯದಾಯಕ!

ಉಡುಪಿ: ತೆಂಗಿನ ಹೊಂಬಾಳೆ (ಕೊಂಬು)ನಿಂದ ಶೋಧಿಸಿದ ‘ಕಲ್ಪರಸ’ ಎಂಬ ಆರೋಗ್ಯ ವರ್ಧಕ ಪಾನೀಯವನ್ನು ಉಡುಪಿ ಕಲ್ಪರಸ ತೆಂಗು ಮತ್ತು ಸರ್ವ ಸಾಂಬಾರ ಉತ್ಪಾದಕರ ಕಂಪೆನಿ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಇದು ಎಳೆನೀರಿಗಿಂತ ಮೂರು ಪಟ್ಟು ಆರೋಗ್ಯದಾಯಕವಾಗಿದ್ದು, ಅಧ್ಯಯನದಿಂದ ದೃಢಪಟ್ಟಿದೆ.
ಸಂಸ್ಥೆಯು ಭಾರತೀಯ ಕಿಸಾನ್‌ ಸಂಘ ಹಾಗೂ ಕಾಸರಗೋಡಿನ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಮಾರ್ಗದರ್ಶನದಲ್ಲಿ ಈ ಯೋಜನೆಯನ್ನು ರೂಪಿಸಿದೆ.

ಕಲ್ಪರಸ ತೆಗೆಯುವ ವಿಧಾನ:
ನೀರಾ ತೆಗೆಯುವ ಮಾದರಿಯಲ್ಲಿಯೇ ಈ ಕಲ್ಪರಸವನ್ನು ತೆಗೆಯಲಾಗುತ್ತದೆ. ನೀರಾವನ್ನು ತೆರೆದ ಮಡಿಕೆ ಹಾಗೂ ಇತರ ಉಪಕರಣ ಬಳಸಿಕೊಂಡು ತೆಗೆದರೆ, ಕಲ್ಪರಸವನ್ನು ಮುಚ್ಚಿದ ಹೈಜಿನಿಕ್‌ ಬಾಕ್ಸ್‌ (ಐಸ್‌ಬಾಕ್ಸ್‌ ಟೆಕ್ನಾಲಾಜಿ) ನಲ್ಲಿ ಸಂಗ್ರಹಿಸಲಾಗುತ್ತದೆ. ಕೊಂಬಿನ ಮಾದರಿಯಲ್ಲಿರುವ ತೆಂಗಿನ ಹೂವಿಗೆ ಹಗ್ಗ ಕಟ್ಟಿ, ಅದನ್ನು ಅರಳದಂತೆ
ಮಾಡಲಾಗುತ್ತದೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವೇಳೆ ಕೊಂಬನ್ನು ಸ್ವಲ್ಪ ಕತ್ತರಿಸಲಾಗುತ್ತದೆ. ಇದರಿಂದ ಹೊರ ಸೂಸುವ ರಸವನ್ನು ಮಂಜುಗಡ್ಡೆ ಹಾಕಿದ ಹೈಜಿನಿಕ್‌
ಬಾಕ್ಸ್‌ನಲ್ಲಿ ಶೇಖರಣೆ ಮಾಡಲಾಗುತ್ತದೆ. ಬಾಕ್ಸ್‌ನ ಕೆಳಭಾಗದಲ್ಲಿ ಮಂಜುಗಡ್ಡೆ ಹಾಕಿ, ಅದರ ಮೇಲೆ ಪ್ಲಾಸ್ಟಿಕ್‌ ಕವರ್‌ ಇಡಲಾಗುತ್ತದೆ. ಕೊಂಬಿನಿಂದ ಬರುವ ಕಲ್ಪರಸವನ್ನು ನೇರವಾಗಿ ಪ್ಲಾಸ್ಟಿಕ್‌ ಕವರ್‌ಗೆ ಬೀಳುವಂತೆ ಮಾಡಲಾಗುತ್ತದೆ. ಬಾಕ್ಸ್‌ ಕೆಳಭಾಗದಲ್ಲಿ ಮಂಜುಗಡ್ಡೆ ಇರುವುದರಿಂದ ರಸವು ಹುಳಿ ಆಗುವುದಿಲ್ಲ. ಇದು ತಿಳಿ ಗೋಲ್ಡನ್‌ ಬಣ್ಣದಲ್ಲಿದ್ದು, ತುಂಬಾ ಸಿಹಿ ಹಾಗೂ ರುಚಿ ಆಗಿರುತ್ತದೆ. ಇದು ಆರೋಗ್ಯ ವರ್ಧಕವಾಗಿದ್ದು, ಡಯಾಬಿಟಿಸ್‌ ರೋಗಿಗಳು ಸೇವಿಸಬಹುದಾಗಿದೆ


.

ಕೆಎಂಎಫ್‌ ಮಾದರಿ ಅಳವಡಿಕೆಗೆ ಚಿಂತನೆ
ಪ್ರಸ್ತುತ ಕೆಎಂಎಫ್‌ ಗ್ರಾಮದಲ್ಲಿ ಹಾಲು ಸಂಗ್ರಹಿಸುವ ರೀತಿಯಲ್ಲಿ ರೈತರಿಂದ ಕಲ್ಪರಸ ಸಂಗ್ರಹಿಸುವ ಉದ್ದೇಶವಿದೆ. ಭಾಕಿಸಂ ವತಿಯಿಂದ ಈಗಾಗಲೇ 54 ತೆಂಗು ಸೊಸೈಟಿ ಹಾಗೂ 3 ತೆಂಗು ಫೆಡರೇಶನ್‌ ರಚಿಸಿದ್ದು, ಅದರಲ್ಲಿ ಒಟ್ಟು 4,820 ರೈತರು ಇದ್ದಾರೆ. ಅವರಿಗೆ ಹೆಚ್ಚಿನ ಆದಾಯ ತಂದುಕೊಡುವ ಸಲುವಾಗಿ ಕಂಪೆನಿಯೊಂದಿಗೆ ವಿಲೀನ ಮಾಡಲಾಗಿದೆ. ಆಯಾ ಭಾಗದ ಸೊಸೈಟಿಯಲ್ಲಿ ಸಂಗ್ರಹಿಸುವ ಕಲ್ಪರಸವನ್ನು ಘಟಕಕ್ಕೆ ಕೊಂಡೊಯ್ದು, ಅಲ್ಲಿ ಸಂಸ್ಕರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಕಂಪೆನಿಯ ಅಧ್ಯಕ್ಷ ಸತ್ಯನಾರಾಯಣ ಉಡುಪ ತಿಳಿಸಿದ್ದಾರೆ.

ಜಪ್ತಿಯಲ್ಲಿ ಕಲ್ಪರಸ ತಯಾರಿಕಾ ಘಟಕ:
ಅಬಕಾರಿ ಇಲಾಖೆಯಿಂದ ಕಲ್ಪರಸ ತಯಾರಿಸುವ ಘಟಕ ಸ್ಥಾಪಿಸಲು ತಾತ್ಕಾಲಿಕ ಲೈಸೆನ್ಸ್‌ ದೊರಕಿದ್ದು, ಕುಂದಾಪುರದ ಜಪ್ತಿಯಲ್ಲಿ ಘಟಕ ನಿರ್ಮಿಸಲಾಗುತ್ತಿದೆ. ಮಾರ್ಚ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಏಪ್ರಿಲ್‌ ಮೊದಲ ವಾರದಲ್ಲಿ ಕಲ್ಪರಸ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಉಡುಪರು ಹೇಳಿದ್ದಾರೆ. ಇದು ರಾಜ್ಯದ ಎರಡನೆ ಕಲ್ಪರಸ ತಯಾರಿಕಾ ಘಟಕವಾಗಿದ್ದು, ಈಗಾಗಲೇ ಮಲೆನಾಡ್‌ ನೆಟ್ಸ್‌ ಎಂಬ ಕಂಪೆನಿ ಕಲ್ಪರಸ ತಯಾರಿಕೆಯಲ್ಲಿ ತೊಡಗಿದೆ. ಬೆಂಗಳೂರು, ಶಿವಮೊಗ್ಗ ಮೊದಲಾದ
ನಗರಗಳಲ್ಲಿ ಮಾರಾಟ ಮಾಡುತ್ತಿದೆ. ಆದರೆ, 20ರಿಂದ 25 ರೈತರಿಂದ ಮಾತ್ರ ಕಲ್ಪರಸ ಸಂಗ್ರಹಿಸುತ್ತಿದೆ.

ರೈತರಿಗೆ ಆಗುವ ಲಾಭ:
8 ತೆಂಗಿನ ಮರಗಳಿಂದ ಕಲ್ಪರಸ ತೆಗೆಯುವ ರೈತರು, ವಾರ್ಷಿಕ 2.40 ಲಕ್ಷಕ್ಕೂ ಅಧಿಕ ಆದಾಯಗಳಿಸಬಹುದು. ಕಲ್ಪರಸ ತೆಗೆದ ಬಳಿಕವೂ ಆ ಮರಗಳಿಂದ ಶೇ. 50ಕ್ಕಿಂತಲೂ ಹೆಚ್ಚು ಕಾಯಿ ಬರುತ್ತದೆ. ಈ ಯೋಜನೆಯಡಿ 2500 ಹಸಿರು ಕಾಲರ್‌ ರೀತಿಯ ಉದ್ಯೋಗ ಸೃಷ್ಟಿಯಾಗಲಿದೆ.