ಉಡುಪಿ: ಆಗಸ್ಟ್ 15 ರಂದು ಕಲ್ಮಾಡಿಯಲ್ಲಿರುವ ವೆಲಂಕಣಿ ಮಾತೆಯ ಕೇಂದ್ರವನ್ನು ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವೆಂದು ಘೋಷಣೆ ಮಾಡಲಾಗುವುದು ಮತ್ತು ಚರ್ಚಿನ ಸುವರ್ಣಮಹೋತ್ಸವವನ್ನು ಆಚರಿಸಲಾಗುವುದು ಎಂದು ಚರ್ಚಿನ ಧರ್ಮಗುರುಗಳಾದ ವಂ. ಬ್ಯಾಪ್ಟಿಸ್ಟ್ ಮಿನೇಜಸ್ ಹೇಳಿದರು.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದ ಅವರು, ಕಲ್ಮಾಡಿಯಲ್ಲಿರುವ ವೆಲಂಕಣಿ ಮಾತೆಯ ಕೇಂದ್ರವು ಪ್ರಪಂಚಾದಾದ್ಯಂತ ಬಹಳ ಪ್ರಸಿದ್ದವಾಗಿದ್ದು ವೆಲಂಕಣಿ ಮಾತೆಯ ಪ್ರತಿಮೆಯನ್ನು 1988 ಅಗಸ್ಟ್ 15 ರಂದು ಉಡುಪಿ ಚರ್ಚ್ ನಿಂದ ಮೆರವಣಿಗೆಯಲ್ಲಿ ತರಲಾಯಿತು. ಈ ಪ್ರತಿಮೆಯನ್ನು ವಂ ವಿಲ್ಸನ್ ಡಿಸೋಜಾ ಅವರು ಕೊಡುಗೆಯಾಗಿ ನೀಡಿದರು ಮತ್ತು ಈ ಪ್ರತಿಮೆಯನ್ನು ತಮಿಳುನಾಡಿನ ವೆಲಂಕಣಿ ಪುಣ್ಯಕ್ಷೇತ್ರದಿಂದ ತರಲಾಯಿತು ಎಂದರು.
ಅಂದಿನ ಮಂಗಳೂರಿನ ಬಿಷಪ್ ಅತೀ ವಂ. ಡಾ. ಬಾಸಿಲ್ ಡಿಸೋಜಾ ಅವರು 1988ರ ಅಗಸ್ಟ್ 15 ರಂದು ಕಲ್ಮಾಡಿಯಲ್ಲಿ ವೆಲಂಕಣಿ ಮಾತೆಯ ಪ್ರತಿಮೆಯನ್ನು ಪ್ರತಿಷ್ಠಾಪಿಸಿದರು. ಪ್ರತಿಷ್ಠಾಪನೆಯ ನಂತರ ಕೇಂದ್ರದಲ್ಲಿ ಅನೇಕ ಪವಾಡಗಳು ನಡೆದಿವೆ.
ಕಲ್ಮಾಡಿಯಲ್ಲಿರುವ ವೆಲಂಕಣಿ ಮಾತೆಯ ಕೇಂದ್ರವನ್ನು 15 ಅಗಸ್ಟ್ 2022 ರಂದು ಉಡುಪಿ ಧರ್ಮ ಪ್ರಾಂತ್ಯದ ಪುಣ್ಯಕ್ಷೇತ್ರವೆಂದು ಅಧಿಕೃತವಾಗಿ ಘೋಷಿಸಲಾಗುವುದು. ಈ ಧಾರ್ಮಿಕ ಕಾರ್ಯಕ್ರಮವು ಬೆಳಿಗ್ಗೆ 10 ಗಂಟೆಗೆ ಕೃತಜ್ಞಾತಾ ಪೂರ್ವಕವಾಗಿ ದಿವ್ಯ ಬಲಿಪೂಜೆಯ ಮೂಲಕ ನಡೆಯಲಿರುವುದು.
ದಿವ್ಯ ಬಲಿಪೂಜೆಯಲ್ಲಿ ಉಡುಪಿ ಧರ್ಮಾಧ್ಯಕ್ಷ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ, ಮಂಗಳೂರು ಧರ್ಮಾಧ್ಯಕ್ಷ ವಂ. ಡಾ. ಪೀಟರ್ ಪೌಲ್ ಸಲ್ಡಾನಾ, ಮಂಗಳೂರಿನ ನಿವೃತ ಬಿಷಪ್ ವಂ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ, ಶಿವಮೊಗ್ಗ ಧರ್ಮಾಧ್ಯಕ್ಷ ವಂ. ಡಾ. ಫ್ರಾನ್ಸಿಸ್ ಸೆರಾವೊ, ಬಳ್ಳಾರಿ ಧರ್ಮಾಧ್ಯಕ್ಷ ವಂ. ಡಾ. ಹೆನ್ರಿ ಡಿಸೋಜಾ, ಬೆಳ್ತಂಗಡಿ ಧರ್ಮಾಧ್ಯಕ್ಷ ವಂ. ಡಾ. ಲಾರೆನ್ಸ್ ಮುಕ್ಕುಯಿ, ಪುತ್ತೂರಿನ ಧರ್ಮಾಧ್ಯಕ್ಷ ವಂ. ಡಾ. ಗೀವರ್ಗಿಸ್ ಮಕಾರಿಯೋಸ್ ಕಲಾಯಿಲ್ ಭಾಗವಹಿಸಲಿದ್ದಾರೆ.
ಸಭಾಕಾರ್ಯಕ್ರಮದಲ್ಲಿ ಎಲ್ಲಾ ಧರ್ಮಾಧ್ಯಕ್ಷರು, ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂ ಮೊನ್ಸಿಂಜ್ಞೊರ್ ಬ್ಯಾಪ್ಟಿಸ್ಟ್ ಮಿನೇಜಸ್, ಉಡುಪಿ ಧರ್ಮಪ್ರಾಂತ್ಯದ ಚಾನ್ಸ್ ಲರ್ ವಂ. ಸ್ಟ್ಯಾನಿ ಬಿ ಲೋಬೊ, ಉಡುಪಿ ವಲಯ ಧರ್ಮಗುರು ವಂ ಚಾರ್ಲ್ಸ್ ಮಿನೇಜಸ್ ಉಪಸ್ಥಿತರಿರುವರು.
ಹಬ್ಬಕ್ಕೆ ಪೂರ್ವ ತಯಾರಿಯಾಗಿ ಒಂಬತ್ತು ದಿನಗಳ ನೊವೆನಾ ಜರುಗಲಿದ್ದು, ಆಗಸ್ಟ್ 6 ರಂದು ಸಂಜೆ 4 ಗಂಟೆಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ. ಆಗಸ್ಟ್ 14 ರಂದು ವೆಲಂಕಣಿ ಮಾತೆಯ ಮೆರವಣಿಗೆ ನಡೆಯಲಿದ್ದು ಉಡುಪಿ ಶಾಸಕ ರಘುಪತಿ ಭಟ್ ಮತ್ತು ಕಲ್ಮಾಡಿ ವಾರ್ಡ್ ಸದಸ್ಯ ಸುಂದರ ಕಲ್ಮಾಡಿ ಚಾಲನೆ ನೀಡಲಿದ್ದಾರೆ ಎಂದು ಚರ್ಚಿನ ಧರ್ಮಗುರುಗಳು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂಜಯ್ ಅಂದ್ರಾದೆ, ಕಾರ್ಯದರ್ಶಿ ಶೋಭಾ ಮೆಂಡೊನ್ಸಾ, ಚರ್ಚಿನ ಸುವರ್ಣ ಮಹೋತ್ಸವ ಸಮಿತಿಯ ಸಂಚಾಲಕ ಸಂದೀಪ್ ಅಂದ್ರಾದೆ, ಸದಸ್ಯೆ ರೋಶನ್ ಆಗ್ನೆಸ್ ಡಿಸೋಜಾ ಉಪಸ್ಥಿತರಿದ್ದರು.