ಕಲಬುರಗಿ: ಅನ್ಯಜಾತಿ ಯುವಕನನ್ನು ಲವ್ ಮಾಡಿದ್ದಕ್ಕೆ ತಂದೆ ತನ್ನ ಸ್ವಂತ 18 ವರ್ಷದ ಮಗಳನ್ನು ಕೊಂದು ಸುಟ್ಟು ಹಾಕಿರುವಂತಹ ಘಟನೆ ಕಲಬುರಗಿ ತಾಲೂಕಿನ ಮೇಳಕುಂದಾ ಗ್ರಾಮದಲ್ಲಿ ನಡೆದಿದೆ.
ಕವಿತಾ ಕೊಲೆಯಾದ ಮಗಳು. ಸದ್ಯ ಫರಹತಬಾದ್ ಠಾಣೆ ಪೊಲೀಸರು ತಂದೆ ಶಂಕರ್ ಕೊಳ್ಳುರು ಬಂಧಿಸಿದ್ದಾರೆ. ಕೊಲೆಗೆ ಸಾಥ್ ನೀಡಿದ್ದ ಶರಣು ಮತ್ತು ದತ್ತಪ್ಪ ಬಂಧನಕ್ಕೆ ಬಲೆ ಬಿಸಿದ್ದಾರೆ.
ಲಿಂಗಾಯತ ಸಮಾಜದ ಯುವತಿ ಅದೇ ಗ್ರಾಮದ ಕುರುಬ ಸಮಾಜದ ಯುವಕ ಮಾಳಪ್ಪ ಪೂಜಾರಿಯನ್ನು ಪ್ರೀತಿಸುತ್ತಿದ್ದಳು. ಕಲಬುರಗಿ ನಗರಕ್ಕೆ ಪಿಯುಸಿ ಅಧ್ಯಯನಕ್ಕೆ ಬರುತ್ತಿದ್ದ ವೇಳೆ ಪ್ರೀತಿ ಮಾಡಿದ್ದರು. ಮೂರ್ನಾಲ್ಕು ತಿಂಗಳ ಹಿಂದೆ ಮನೆಯವರಿಗೆ ಪ್ರೀತಿ ವಿಷಯ ತಿಳಿದಿದ್ದು, ಕಾಲೇಜು ಬಿಡಿಸಿದ್ದರು.
ವಿಷ ಸೇವಿಸಿ ಮೃತಪಟ್ಟಿದ್ದಾಳೆಂದು ಬಿಂಬಿಸಿದ ತಂದೆ:
ಯುವತಿ ತಂದೆ ಶಂಕರ್, ಸಹೋದರ ಶರಣು, ಸಂಬಂಧಿ ದತ್ತು ಮಧ್ಯರಾತ್ರಿಯಲ್ಲಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ, ಕ್ರಿಮಿನಾಶಕ ಸಿಂಪಡಿಸಿ ವಿಷ ಸೇವಿಸಿ, ಮೃತಪಟ್ಟಿದ್ದಾಳೆಂದು ಬಿಂಬಿಸಿದ್ದಾರೆ. ನಂತರ ಬೆಳಗ್ಗೆ 9ಗಂಟೆ ಸುಮಾರಿಗೆ ಗ್ರಾಮದ ಹೊರವಲಯದ ಸಂಬಂಧಿಕರ ಜಮೀನಿನಲ್ಲಿ ದೇಹವನ್ನು ಸುಟ್ಟು ಹಾಕಿದ್ದಾರೆ.
ಹೆತ್ತ ಮಗಳನ್ನು ಕೊಂದು ಮೊದಲು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಬಿಂಬಿಸಿದ್ದರು. ಆದರೆ ಪೊಲೀಸರ ತನೀಖೆಯ ವೇಳೆ ಈ ಘನಘೋರ ಕೃತ್ಯ ಬಯಲಾಗಿದೆ.
ಇದೀಗ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಪಿಐ ಮಂಜುನಾಥ ಇಕ್ಕಳಕಿ ಸೇರಿದಂತೆ ಇತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.












