85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಜ್ಞಾನದಾಸೋಹಕ್ಕೆ ಕೈ ಬೀಸಿ ಕರೆಯುತ್ತಿವೆ ಪುಸ್ತಕ ಮಳಿಗೆಗಳು

ಕಲಬುರ್ಗಿ: 85ನೇ ಅಖಿಲ ಭಾರತಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಕಲಬುರ್ಗಿಯ ವಿಶ್ವ ವಿದ್ಯಾಲಯ ಆವರಣದಲ್ಲಿನ ಪುಸ್ತಕ ಮಳಿಗೆಗಳು ಕಳೆಕಟ್ಟಿವೆ. ದಾಖಲೆಯನ್ನಬಹುದಾದ 800 ಕ್ಕೂ ಹೆಚ್ಚಿನ ಪುಸ್ತಕ ಮಳಿಗೆಗಳು, ಪುಸ್ತಕ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಅಕ್ಷರ ಜಾತ್ರೆಯಲ್ಲಿ ಪಾಲ್ಗೊಂಡಿರುವುದು ಸಾಹಿತ್ಯ ಪ್ರಿಯರಿಗೆ ಭೂರಿ ಭೋಜನ  ಒದಗಿಸಿದಂತಾಗಿದೆ.
ಸಾಹಿತ್ಯ ಪ್ರಿಯರು ಮುಖ್ಯವಾಗಿ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ  ಪುಸ್ತಕ ಪ್ರೇಮಿಗಳು ಪುಸ್ತಕ ಮಳಿಗೆಗಳ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪುಸ್ತಕ ಖರೀದಿಸುತ್ತಿದ್ದುದು, ಈ ಸಮ್ಮೇಳನದಲ್ಲಿ ಪುಸ್ತಕ ಖರೀದಿ ಜೋರಾಗಿಯೇ ನಡೆಯುವುದರ ಮುನ್ಸೂಚನೆಯಂತಿದೆ. ಸಮ್ಮೇಳನ ಆರಂಭದ ದಿನದಂದೇ ಹೆಚ್ಚಿನ ಪುಸ್ತಕ ವ್ಯಾಪಾರ ಕಂಡುಬಂದಿದ್ದು, ಪುಸ್ತಕ ವ್ಯಾಪಾರಿಗಳಿಗೆ ಇಂದಿನ ವಹಿವಾಟು ಖುಷಿ ನೀಡಿದೆ.
ಈ ಪುಸ್ತಕ ಮಳಿಗೆಗಳಲ್ಲಿ ಸುಮಾರು 200 ಕ್ಕೂ ಹೆಚ್ಚು ದೊಡ್ಡ ಮಳಿಗೆಗಳಿದ್ದು, ನಾಡಿನ ಹೆಸರಾಂತ ಪ್ರಕಾಶನ ಸಂಸ್ಥೆಗಳು, ಧಾರ್ಮಿಕ ಪುಸ್ತಕ ಪ್ರಕಾಶನ ಸಂಸ್ಥೆಗಳು, ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷಾ ಜ್ಞಾನ ಮಂಜರಿಗಳ ಪ್ರಕಾಶಕರು, ಕೃಷಿ, ಯೋಗ, ಶಿಕ್ಷಣ, ಮಕ್ಕಳ ಸಾಹಿತ್ಯ, ವಚನ, ದಾಸ ಹಾಗೂ ದಲಿತ ಸಾಹಿತ್ಯ ಸೇರಿದಂತೆ ಹತ್ತು ಹಲವು ಸಾಹಿತ್ಯ ಪ್ರಕಾರಗಳಿಗಾಗಿಯೇ ಮೀಸಲಿರುವ ಪ್ರಕಾಶನ ಸಂಸ್ಥೆಗಳು ಹಾಗೂ ಸಣ್ಣ ಪುಟ್ಟ ನೂರಾರು ಪ್ರಕಾಶಕರು, ಬುಕ್ ಸ್ಟಾಲ್‍ನವರು ಪಾಲ್ಗೊಂಡಿರುವುದು ಕನ್ನಡ ಸಾಹಿತ್ಯದ ಹರವು ಹಾಗೂ ಕನ್ನಡ ಪುಸ್ತಕ ಪ್ರಪಂಚದ ಶ್ರೀಮಂತಿಕೆ ಅನಾವರಣಗೊಂಡಿದೆ.
ಪುಸ್ತಕ ಪ್ರಿಯರನ್ನುಆಕರ್ಷಿಸಲು ಇಲ್ಲವೆ ತಮ್ಮ ಪುಸ್ತಕ ಮಾರಾಟ ತೀವ್ರತೆ ಪಡೆದುಕೊಳ್ಳಲೆಂದೋ ಶೇ 10 ರಿಂದ 50 ರವರೆಗೆ ರಿಯಾಯತಿ ಮಾರಾಟ ಬಹುತೇಕ ಮಳಿಗೆಗಳಲ್ಲೂ ಕಂಡುಬರುತ್ತಿದೆ. ಕೆಲವು ಪ್ರಕಾಶನಗಳು ಹಳೆಯ ಪುಸ್ತಕಗಳಿಗೆ ಶೇ.50 ಕ್ಕಿಂತ ಹೆಚ್ಚಿನರಿಯಾಯಿತಿ ನೀಡುತ್ತಿದ್ದರೆ, ಕೆಲವರು ಒಂದು ಪುಸ್ತಕ ಖರೀದಿಸಿದರೆ, ಇನ್ನೊಂದುಉಚಿತಎನ್ನುವ ಫಲಕ ಹಾಕಿ ವ್ಯವಹಾರ ಹೆಚ್ಚಿಸಿಕೊಂಡಿದ್ದಾರೆ.
ಸುವ್ಯವಸ್ಥಿತ ಮಳಿಗೆಗಳು:
ಈ ಬಾರಿಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳಿಗೆ ಸುವ್ಯವಸ್ಥಿತವಾದ ಸ್ಥಳಾವಕಾಶ ಒದಗಿಸಿದ್ದು, ಮಳೆ, ಬಿಸಿಲಿಗೂ ತೊಂದರೆಯಾಗದ ರೀತಿ ಆಧುನಿಕವಾಗಿ ಗುಣಮಟ್ಟದ ವ್ಯವಸ್ಥೆ ಮಾಡಲಾಗಿದೆ. ಪುಸ್ತಕ ಪ್ರಕಾಶಕರು ರಾಜ್ಯದ ನಾನಾ ಜಿಲ್ಲೆಗಳಿಂದ  ಆಗಮಿಸಿದ್ದು, ಅದರಲ್ಲಿ ಬೆಂಗಳೂರಿನ ಸಪ್ನ ಬುಕ್ ಹೌಸ್, ನವ ಜೋತಿ ಪ್ರಕಾಶನ,  ವಿಜಯಪುರದ ಪ್ರಿಯದರ್ಶಿನಿ ಪ್ರಕಾಶನ ನವಕರ್ನಾಟಕ ಪ್ರಕಾಶನ, ಗದುಗಿನ ಲಡಾಯಿ ಪ್ರಕಾಶನ, ಶಿವಕುಮಾರ ಏಜೆನ್ಸಿ, ಶಾಬಾದಿಮಠ ಪ್ರಕಾಶನ, ಗಣೇಶ ಪ್ರಕಾಶನ, ಶಿವಮೊಗ್ಗದ ಚಿರಂತನ ಬುಕ್ ಹೌಸ್, ಅಭಿರುಚಿ ಪ್ರಕಾಶನ ಮೈಸೂರು, ಕಲಬುರ್ಗಿಯ ಸ್ನೇಹ ಪ್ರಕಾಶನ, ಸಿದ್ದಲಿಂಗೇಶ್ವರ ಬುಕ್‍ಡಿಪೋ, ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ, ಪ್ರಮುಖವಾಗಿ ಕಂಡು ಬಂದವು.
ಮೈಸೂರು ವಿಶ್ವವಿದ್ಯಾಲಯ, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿ, ಕಲಬುರ್ಗಿಯ ಶರಣಬಸವ ವಿವಿ ಪ್ರಸಾರಾಂಗಗಳು ಪುಸ್ತಕ ಪ್ರದರ್ಶನದಲ್ಲಿ  ಸುಲಭ ಬೆಲೆಯ ಅವತರಣಿಕೆಗಳು ಪುಸ್ತಕ ಪ್ರಿಯರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದ್ದವು.
ಧಾರ್ಮಿಕ ಮಳಿಗೆಗಳು:
ಇನ್ನು ಪುಸ್ತಕ ಪ್ರಕಾಶನದಲ್ಲಿ ಧಾರ್ಮಿಕ ಸಾಹಿತ್ಯ ಗಮನಸೆಳೆಯುವಂತಿದ್ದು, ಕಲಬುರ್ಗಿಯ ರಾಮಕೃಷ್ಣ ವಿವೇಕಾನಂದ ಆಶ್ರಮ, ಬೆಂಗಳೂರು ಇಸ್ಕಾನ್ ‍ಟೆಂಪಲ್‍ನವರು ಶ್ರೀಕೃಷ್ಣ ಭಗವಾನ್‍ಕುರಿತು, ಅಲ್ಲದೆ ಬಸವಣ್ಣವರು, ಡಾ. ಅಂಬೇಡ್ಕರ್‍ ಅವರ ಸಮಗ್ರ ಸಂಪುಟಗಳನ್ನು ಒಳಗೊಂಡ ಪುಸ್ತಗಳ ಮಾರಾಟ ಜೋರಾಗಿತ್ತು. ಇನ್ನು ಇಸ್ಲಾಂ ಧರ್ಮದ ಕುರಿತ ಕುರಾನ್ ಹಾಗೂ ಇತರೆ ಪ್ರಕಟಣೆಗಳನ್ನು ಉಚಿತವಾಗಿ ವಿತರಣೆ ಮಾಡುತ್ತಿದ್ದುದು ಪುಸ್ತಕ ಮಳಿಗೆಯಲ್ಲಿ ಕಂಡುಬಂದಿತು.
ಕಾದಂಬರಿಗೆ ಶುಕ್ರದೆಸೆ: 
ಅವಸರದ ಬದುಕಿನ ಇಂದಿನ ದಿನಗಳಲ್ಲಿ ಕಾದಂಬರಿ ಓದುವ ಹವ್ಯಾಸ ಕ್ಷೀಣಿಸುತ್ತಿರುವ ಹಿನ್ನಲೆಯಲ್ಲಿ ಕಾದಂಬರಿ ಕೃತಿಗಳಿಗೆ ಹೆಚ್ಚಿನ ರಿಯಾಯಿತಿ ನೀಡುವ ಮೂಲಕ ಕಾದಂಬರಿಗಳ ಭರ್ಜರಿ ಮಾರಾಟಕ್ಕೆ ವಿವಿಧ ಪ್ರಕಾಶನಗಳು ಮುಂದಾಗಿದ್ದು ಕಂಡು ಬಂದಿತು. ಕಾದಂಬರಿ ಪ್ರಿಯರು ಇಲ್ಲಿ ತಮಗೆ ಇಷ್ಟವಾದ ಲೇಖಕರುಗಳ ಕಾದಂಬರಿಗಳನ್ನು ಆಯ್ದು ಖರೀದಿಸಬಹುದಾಗಿದೆ.
ಯುವಜನರು ಹಾಗೂ ವಿಧ್ಯಾರ್ಥಿಗಳಿಗಾಗಿ ವೃತ್ತಿ ಶಿಕ್ಷಣ ಹಾಗೂ ಐಎಎಸ್, ಐಪಿಎಸ್, ಕೆಎಎಸ್, ಎಫ್‍ಡಿಎ, ಬ್ಯಾಂಕಿಂಗ್ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕ ಮಳಿಗೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಉದ್ಯೋಗ ಅರಸುತ್ತಿರುವವರ ದಂಡೇ ನೆರೆದಿತ್ತು.
ಶಾಲೆಗಳಲ್ಲಿ ಶಿಕ್ಷಕರಿಗೆ ಬೋಧಿಸಲು ಅನುಕೂಲವಾಗುವಂತೆ, ದೊಡ್ಡ ಅಳತೆಯ ಪಟಗಳನ್ನು, ಬೋಧನಾ ಮಾದರಿಗಳನ್ನು ತಯಾರಿಸಿದ್ದು, ಮಳಿಗೆಗಳ ಮೇಲೆಯೇ ‘ಶಿಕ್ಷಕರಿಗೆ ಮಾತ್ರ’ ಎಂಬ ಹೆಸರಿಟ್ಟಿದ್ದು, ಶಿಕ್ಷಕರನ್ನು ಆಕರ್ಷಿಸುವಂತಿತ್ತು. ಇಂಗ್ಲೀಷ್‍ನಲ್ಲಿ ಕಾಲಗಳ ಕಲಿಕೆಗೆ ಪಾಠವನ್ನು ಸಿದ್ಧಗೊಳಿಸಿ ಮಾರಾಟಕ್ಕಿರಿಸಿದೆ.
ಕರ್ನಾಟಕ, ವಿಶ್ವ ಭೂಪಟ, ಭಾರತದೇಶ, ಕಲಬುರ್ಗಿಜಿಲ್ಲೆಯ ನಕ್ಷೆಗಳನ್ನು ದೊಡ್ಡ ಅಳತೆ, ಪೋಸ್ಟರ್ ಗಳ ಅಳತೆಯಲ್ಲಿ ತಯಾರಿಸಿ, ಮಾರಾಟಕ್ಕೆಇಟ್ಟಿದ್ದು, ವಿದ್ಯಾರ್ಥಿಗಳು ಖರೀದಿಗೆ ಮುಗಿಬಿದ್ದಿದ್ದು ಕಂಡುಬಂತು.
ಸಮ್ಮೇಳನದ ಅಂಗವಾಗಿ ಎಲ್ಲಾ ಶಾಲೆ ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ರಜೆ ನೀಡಿದ್ದರಿಂದ ಸಾರ್ವಜನಿಕರು ತಮ್ಮ ಮಕ್ಕಳು, ಬಂಧುಗಳ ಸಮೇತ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿ, ಖುಷಿಯಾಗಿ ಎಲ್ಲ ಮಳಿಗೆಗಳನ್ನು ಆಸಕ್ತಿಯಿಂದ ವೀಕ್ಷಿಸಿ, ಪುಸ್ತಕಾಸಕ್ತರು ಖರೀದಿಗೆ ಮುಂದಾದದ್ದು ಕಂಡುಬಂತು.
ಪುಸ್ತಕ ಮಳಿಗೆಗಳಲ್ಲಿ ಸಮ್ಮೇಳನದ ಮೊದಲ ದಿನ ಉತ್ತಮ ವಹಿವಾಟು ನಡೆದಿದ್ದು, ಪುಸ್ತಕ ಪ್ರಕಾಶಕರು, ಮಾರಾಟಗಾರರು ಖುಷಿಯಲ್ಲಿದ್ದಾರೆ. ಇನ್ನೂಎರಡು ದಿನಗಳ ಕಾಲ ಸಮ್ಮೇಳನ ನಡೆಯಲಿದ್ದು, ಹೀಗಾಗಿ ಈ ಹಿಂದಿನ ಸಮ್ಮೇಳನಗಳ ಪುಸ್ತಕ ಮಾರಾಟ ಪ್ರಮಾಣದ ದಾಖಲೆಯನ್ನು ಕಲಬುರ್ಗಿಯ 85 ನೇ ಅಖಿಲ ಭಾರತಕನ್ನಡ ಸಾಹಿತ್ಯ ಸಮ್ಮೇಳನ ಮುರಿಯುವುದೇ ಕಾದು ನೋಡಬೇಕು.