ಕಲಬುರಗಿ :ಕಲಬುರಗಿಯ ಖಾಸಗಿ ಇಂಟರ್ ನ್ಯಾಷನಲ್ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಧ್ರುವಂತ್ ಆಲೂರ್ ಎಂಬಾತ ಏಷ್ಯಾ ಬುಕ್ ಆಪ್ ರೆಕಾರ್ಡ್‌ನಲ್ಲಿ ತನ್ನ ಬುದ್ಧಿ ಶಕ್ತಿಯಿಂದ ಗ್ರಾಂಡ್ ಮಾಸ್ಟರ್ ಎಂಬ ಬಿರುದು ಪಡೆದಿದ್ದಾನೆ.
ಏಷ್ಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯವರು ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಿ, ಗ್ರಾಂಡ್ ಮಾಸ್ಟರ್ ಎಂಬ ಶೀರ್ಷಿಕೆ ಕೂಡ ನೀಡಿದ್ದಾರೆ. ಈ ಮುಂಚೆ ದಕ್ಷಿಣ ಅಂಡಮಾನ್ & ನಿಕೋಬಾರ್ನ ಶಿವಯೋಗಿತ ಐದು ನಿಮಿಷದಲ್ಲಿ 198 ಸ್ಪೆಲ್ಲಿಂಗ್ ಮತ್ತು ತಮಿಳುನಾಡಿನ ರಿಕ್ಷೀತ ಎಂಬ ಪ್ರತಿಭೆಗಳು ಮಾಡಿದ್ದ ರೆಕಾರ್ಡ್ ಅನ್ನು ದ್ರುವಂತ್ ಹಿಂದಿಕ್ಕಿ, ಅದಕ್ಕೂ ಮೀರಿದ ಸಾಧನೆ ಮಾಡಿದ್ದಾನೆ. ಕಳೆದ 2022 ರ ಸಾಲಿನಲ್ಲಿ ಧ್ರುವಂತ್ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಕೂಡ ಮಾಡಿದ್ದ. ಈಗ ಏಷ್ಯಾ ಬುಕ್ ಆಫ್ ರೆಕಾರ್ಡ್ ಸಾಧಕರ ಪಟ್ಟಿಗೆ ಸೇರುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲಬುರಗಿಯ ಹಿರಿಮೆ ಹೆಚ್ಚಿಸಿದ್ದಾನೆ.
ಹೌದು, ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು ಎನ್ನುವ ಹಾಗೆ ಈ ಬಾಲಕನ ಸಾಧನೆ ಕೂಡ ದೊಡ್ಡದು. ಕಲಬುರಗಿಯ ಖಾಸಗಿ ಇಂಟರ್ ನ್ಯಾಷನಲ್ ಶಾಲೆಯೊಂದರಲ್ಲಿ ಎರಡನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಧ್ರುವಂತ್ ಆಲೂರ್ ತನ್ನ ಸಾಧನೆ ಮೂಲಕ ಗಮನ ಸೆಳೆದಿದ್ದಾನೆ. ಕೇವಲ ಐದು ನಿಮಿಷದಲ್ಲಿ 310 ಇಂಗ್ಲಿಷ್ ಶಬ್ಧಗಳ ಸ್ಪೆಲ್ಲಿಂಗ್ ಅನ್ನು ಅರಳು ಹುರಿದಂತೆ ಹೇಳುವ ಸಾಮರ್ಥ್ಯ ಹೊಂದಿದ್ದಾನೆ. ಎಷ್ಟೇ ವೇಗವಾಗಿ ಶಬ್ಧಗಳನ್ನು ಕೇಳಿದರೂ ಅದೇ ವೇಗದಲ್ಲಿ ಸ್ಪೆಲ್ಲಿಂಗ್ ಪುನರಾವರ್ತನೆ ಮಾಡ್ತಾನೆ. ತನ್ನ ವಿಶೇಷ ಪ್ರತಿಭೆ ಮೂಲಕ 2023 ನೇ ಸಾಲಿನ ಏಷ್ಯಾ ಬುಕ್ ಆಫ್ ರೆಕಾರ್ಡ್ ಪುಸ್ತಕ ಪಟ್ಟಿಗೆ ಸೇರಿದ್ದಾನೆ.
ಧ್ರುವಂತ್ ಸಾಧನೆ ಹಿಂದೆ ಈತನ ತಂದೆ ಕಲಬುರಗಿ ಪಿಡಿಎ ಕಾಲೇಜಿನ ಪ್ರಾಧ್ಯಾಪಕ ರಾಜೀವ್ ಆಲೂರ್ ಹಾಗೂ ತಾಯಿ ಕವಿತಾ ಆಲೂರ್ ಶ್ರಮ ಕೂಡ ಸಾಕಷ್ಟಿದೆ. ಬಾಲಕ ಯುಕೆಜಿಯಲ್ಲಿ ಇದ್ದಾಗ ಅಂಗಡಿಗಳ ನಾಮಫಲಕಗಳನ್ನು ರೀಕಾಲ್ ಮಾಡುತ್ತಿದ್ದನಂತೆ. ಮಗನ ಈ ಪ್ರವೀಣ್ಯತೆ ಹಾಗೂ ಆತನ ನೆನಪಿನ ಸಾಮರ್ಥ್ಯ ಗುರುತಿಸಿದ ತಂದೆ, ಆತನಿಂದ ಏನಾದ್ರೂ ಸಾಧನೆ ಮಾಡಿಸಲು ಮುಂದಾಗಿದ್ರು.
ಕೋವಿಡ್ ಸಂದರ್ಭದಲ್ಲಿ ಶಾಲೆಗಳಿಗೆ ಸಾಲು ಸಾಲು ರಜೆ ನೀಡಿದ್ದ ಪರಿಣಾಮ ಮನೆಯಲ್ಲಿ ಕುಳಿತಿದ್ದ ಬಹುತೇಕ ಮಕ್ಕಳು ಮೊಬೈಲ್ ಬಳಕೆಗೆ ಅಂಟಿಕೊಂಡಿದ್ರು. ಆದ್ರೆ ಇಲ್ಲೊಬ್ಬ ಪೋರ ರಜೆ ಸಮಯ ಸದುಪಯೋಗ ಮಾಡಿಕೊಂಡು ದಾಖಲೆ ಬರೆಯುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾನೆ. ಮೊದಲು ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಪಟ್ಟಿಗೆ ಸೇರಿದ್ದ ಈ ಬಾಲಕ, ಇದೀಗ ಏಷ್ಯಾ ಬುಕ್ ಆಪ್ ರೆಕಾರ್ಡ್‌ನಲ್ಲಿ ಗ್ರಾಂಡ್ ಮಾಸ್ಟರ್ ಎಂಬ ಬಿರುದು ಪಡೆದು ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತಂದಿದ್ದಾನೆ.
ಈ ನಡುವೆ ಮಹಾಮಾರಿ ಕೋವಿಡ್ ವಕ್ಕರಿಸಿ ಇಡಿ ವಿಶ್ವವೇ ತಲ್ಲಣಗೊಂಡಿತ್ತು. ಕೋವಿಡ್ ಭಯದಿಂದ ಶಾಲೆಗಳಿಗೆ ರಜೆ ನೀಡಲಾಯಿತು. ಮಕ್ಕಳು ಮನೆಯಲ್ಲಿಯೇ ಸಮಯ ವ್ಯರ್ಥ ಮಾಡುವಂತಾಯಿತು. ಆದ್ರೆ, ಧ್ರುವಂತ್ ತಾಯಿ ಮಗನ ಸಮಯ ವ್ಯರ್ಥ ಮಾಡೋದು ಬೇಡವೆಂದು ಗೂಗಲ್ನಲ್ಲಿ ಬೇರೆ ಮಕ್ಕಳಲ್ಲಿರುವ ಟ್ಯಾಲೆಂಟ್ ಕುರಿತು ಸರ್ಚ್ ಮಾಡಿ, ಮಗನ ಸಾಧನೆಯ ಮಾರ್ಗ ಕಂಡುಕೊಂಡರು.ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಗನ ಸಾಧನೆ ಕುರಿತು ಮಾತನಾಡಿದ ತಾಯಿ ಕವಿತಾ, “ಪುತ್ರನ ಸಾಧನೆ ಸಂತಸ ತಂದಿದ್ದು, ವಿಶ್ವ ದಾಖಲೆ ಪಟ್ಟಿಗೆ ಸೇರೋದು ಮುಂದಿನ ಗುರಿಯಾಗಿದೆ” ಎಂದು ಖುಷಿಯಿಂದ ಹೇಳಿದ್ದಾರೆ. ಧ್ರುವಂತ್ ಪಠ್ಯ ಹಾಗೂ ಕ್ರೀಡಾ ಚಟುವಟಿಕೆಯಲ್ಲಿಯೂ ಮುಂದಿದ್ದಾನೆ. ಈತನಿಗೆ ಓರ್ವ ಸಹೋದರಿಯಿದ್ದು ಐದನೇ ತರಗತಿಯಲ್ಲಿ ಓದುತ್ತಿದ್ದಾಳೆ. ಆಕೆ ಸುಮಧರ ಕಂಠ ಹೊಂದಿದ್ದು, ಗಾಯನದ ಮೂಲಕ ಪ್ರಶಂಸೆಗೆ ಪಾತ್ರಳಾಗಿದ್ದಾಳೆ ಎಂದಿದ್ದಾರೆ.
ಇನ್ನು ಬಾಲಕನ ಸಾಧನೆ ಗಮನಿಸಿದ ಡಾ.ಶಂಕರ್ ಪ್ರತಿಷ್ಠಾನ, ಆಕಾಶವಾಣಿ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಸತ್ಕರಿಸಿವೆ. ಪುಟ್ಟ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮೂಲಕ ಉತ್ತುಂಗಕ್ಕೆ ಏರಿದ ಧ್ರುವಂತ್ ಮತ್ತಷ್ಟು ಸಾಧನೆ ಮಾಡಲಿ ಎನ್ನುವುದೇ ನಮ್ಮ ಆಶಯ.
5 ನಿಮಿಷದಲ್ಲಿ 198 ಶಬ್ಧಗಳ ಸ್ಪೆಲ್ಲಿಂಗ್ ಹೇಳಿ ಸಾಧನೆ ಮಾಡಿದ ಮಗುವನ್ನು ನೋಡಿ, ಅದಕ್ಕಿಂತ ಕನಿಷ್ಠ 2 ಹೆಚ್ಚಿಗೆ ಅಂದ್ರೆ 200 ಶಬ್ಧಗಳ ಸ್ಪೆಲ್ಲಿಂಗ್ ಪುನರಾವರ್ತನೆ ಮಾಡಿದ್ರೆ ನಮ್ಮ ಮಗ ಕೂಡ ಸಾಧನೆ ಮಾಡಬಹುದು ಎಂದು ಒಂದು ತಿಂಗಳ ಕಾಲ ಸತತ ಅಭ್ಯಾಸ ಮಾಡಿಸಿ, ಕಲೆಯನ್ನು ಕರಗತ ಮಾಡಿಸಿದ್ದಾರೆ. ಇನ್ನೂರು ಶಬ್ಧ ಹೇಳಿಸಲು ಪೋಷಕರು ಪ್ರಯತ್ನ ಪಟ್ಟರೆ ಧ್ರುವಂತ್ ಅಷ್ಟೇ ಸಮಯದಲ್ಲಿ 310 ಶಬ್ಧಗಳ ಸ್ಪೆಲ್ಲಿಂಗ್ ಹೇಳಿ ಸಾಧಕನಾಗಿ ಹೊರಹೊಮ್ಮಿದ್ದಾನೆ.