ಫೆ. 21ರಂದು ಕಜ್ಕೆ ಅನ್ನಪೂರ್ಣೆಶ್ವರಿ ದೇವಾಲಯ ಲೋಕಾರ್ಪಣೆ: ಖ್ಯಾತ ಶಿಲ್ಪಿ ಮೈಸೂರಿನ ಅರುಣ್‌ ಯೋಗಿರಾಜ್‌ ಅವರಿಂದ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಶಿಲಾ ವಿಗ್ರಹ ನಿರ್ಮಾಣ

ಹೆಬ್ರಿ: ಸುತ್ತಲೂ ಅರಣ್ಯ ಪ್ರದೇಶವನ್ನು ಆವರಿಸಿರುವ ಕಜ್ಕೆಯಲ್ಲಿ ಆದಿಶಂಕರಾಚಾರ್ಯರು ಕಾಲ್ನಡಿಗೆಯಲ್ಲಿ ಕೊಲ್ಲೂರಿಗೆ ಸಂಚರಿಸುವಾಗ ಮಧ್ಯಾಹ್ನದ ಹೊತ್ತು ಈ ಸುಂದರವಾದ ಪುಣ್ಯಭೂಮಿಯಲ್ಲಿ ಭಿಕ್ಷೆ ಪಡೆದಿದ್ದರು ಎನ್ನುವ ಪ್ರತೀತಿ ಇದೆ. ಸಹಸ್ರಾರು ವರುಷಗಳಿಂದ ಭೂಗತವಾಗಿದ್ದ ಈ ಸ್ಥಳವು, ಪ್ರಸ್ತುತ ಕೃಷ್ಣಯ್ಯ ಶೆಟ್ಟಿ ಮತ್ತು ಶ್ರೀಧರ ಕಾಮತ್‌ ಎಂಬವರು ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಎರಡು ಎಕರೆ ಜಾಗವನ್ನು ದಾನವಾಗಿ ನೀಡಿರುತ್ತಾರೆ.

ಶ್ರೀ ವಿಶ್ವಕರ್ಮ ಜಗದ್ಗುರು ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಶಿಲಾಮಯ ದೇವಸ್ಥಾನವು ಐದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಫೆ. 21ರಂದು ಸಕಲ ವಿಧಿವಿಧಾನಗಳೊಂದಿಗೆ ಲೋಕಾರ್ಪಣೆಯ ಕಾರ್ಯ ನೆರವೇರಲಿದೆ.

ಶ್ರೀ ಅನ್ನಪೂರ್ಣೆಶ್ವರಿ ದೇವಾಲಯದಲ್ಲಿ ಶ್ರೀ ಗಣಪತಿ ದೇವರು, ಶ್ರೀ ಆದಿಶಂಕರಾಚಾರ್ಯರ ಶಿಲಾಬಿಂಬ ಪ್ರತಿಷ್ಠೆ ಹಾಗೂ ನಾಗದೇವರ ಸನ್ನಿಧಿಯ ಪ್ರತಿಷ್ಠೆ ನಡೆಯಲಿದೆ. ಫೆ. 13ರಿಂದ ಫೆ. 21ರವರೆಗೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಹಾಕುಂಭಾಭಿಷೇಕವು ಜರುಗಲಿದ್ದು, ಖ್ಯಾತ ಶಿಲ್ಪಿ ಮೈಸೂರಿನ ಅರುಣ್‌ ಯೋಗಿರಾಜ್‌ ಅವರಿಂದ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಶಿಲಾ ವಿಗ್ರಹ ರಚನೆಗೊಂಡಿದ್ದು, ವಾಸ್ತುಶಿಲ್ಪಿ ಸುರತ್ಕಲ್‌ ಆನಂದ ಆಚಾರ್ಯ, ಶಿಲಾ ಶಿಲ್ಪಿ ಮೊಳಹಳ್ಳಿ ರಾಘವೇಂದ್ರ ಆಚಾರ್ಯ, ಕಾಷ್ಠಶಿಲ್ಪಿ ಬಂಡೀಮಠ ಶ್ರೀಧರ ಆಚಾರ್ಯ ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಾರ್ಕಳದ ಅತ್ತೂರಿನ ಶಿಲ್ಪಿ ರಾಮಚಂದ್ರ ಆಚಾರ್ಯ ಆದಿಶಂಕರಾಚಾರ್ಯರ ವಿಗ್ರಹವನ್ನು ಮತ್ತು ಮೈಸೂರಿನ ಶಿಲ್ಪಿ ಪ್ರಕಾಶ್‌ ಆಚಾರ್ಯ ಶ್ರೀ ಗಣಪತಿ ದೇವರ ವಿಗ್ರಹವನ್ನು ರಚಿಸಿದ್ದಾರೆ.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಪಡುಕುತ್ಯಾರಿನ ಕಾಳಹಸ್ತೇಂದ್ರ ಮಹಾಸ್ವಾಮೀಜಿಯವರೊಂದಿಗೆ ವಿವಿಧ ಮಠಾಧೀಶರು, ಗಣ್ಯರು ಭಾಗವಹಿಸಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ಫೆ. 18 ರಂದು ಬೆಳಿಗ್ಗೆ 9 ಗಂಟೆ ನಾಲ್ಕೂರು ಗ್ರಾಮ ಪಂಚಾಯತ್ ಮುಂಭಾಗದಿಂದ ಭವ್ಯ ಹೊರೆಕಾಣಿಕೆಯ ಮೆರವಣಿಗೆ ಹೊರಡಲಿದೆ. ಫೆ. 21ರಂದು ದೇವರ ಪ್ರತಿಷ್ಠಾಪನೆ ಹಾಗೂ ಮಹಾ ಕುಂಭಾಭಿಷೇಕ ನಡೆಯಲಿದೆ.

ಮಹಾಮಾತೆ ಶ್ರೀ ಅನ್ನಪೂರ್ಣೇಶ್ವರಿಗೆ ಚಿನ್ನದ ಕರಿಮಣಿ ಸರ ಸಮರ್ಪಣೆ

ಕಜ್ಕೆ ಮಹಾಮಾತೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಸ್ಥಳದಾನಿಗಳಾದ ಕಜ್ಕೆ ಶ್ರೀಧರ ಕಾಮತ್ ದಂಪತಿಗಳು ಚಿನ್ನದ ಕರಿಮಣಿ ಸರ ಮತ್ತು ಸೀರೆಯನ್ನು ಶ್ರೀ ಗುರುಗಳ ಮೂಲಕ ಫೆ. 16ರಂದು ಶುಕ್ರವಾರ ಸಮರ್ಪಿಸಿದರು.