ಕಡಿಯಾಳಿ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಕೆಸರುಗದ್ದೆ ಕ್ರೀಡಾಕೂಟ

ಉಡುಪಿ: ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಕಡಿಯಾಳಿ ದೇವಸ್ಥಾನ ವಠಾರದಲ್ಲಿ ಭಾನುವಾರ ‘ಕೆಸರು ಗದ್ದೆ’ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಲಾಯಿತು.
ಗದ್ದೆಗೆ ಇಳಿದ ನೂರಾರು ಮಂದಿ ಕೆಸರು ನೀರಿನಲ್ಲಿ ಮಿಂದೆದ್ದರು. ಒಬ್ಬರ ಮೇಲೊಬ್ಬರು
ಕೆಸರು ಎರಚಿಕೊಂಡು ಸಂಭ್ರಮಿಸಿದರು. ಹಿರಿಯರು ಕಿರಿಯರೊಂದಿಗೆ ಸೇರಿಕೊಂಡು
ಕೆಸರಿನಲ್ಲಿ ಕೆಲ ಸಮಯ ಕಳೆದರು.
ಕಡಿಯಾಳಿ ದೇಗುಲದ ವಠಾರದ ಗದ್ದೆಯಲ್ಲಿ ಗ್ರಾಮೀಣ ಸೊಗಡು ಅನಾವರಣಗೊಂಡಿತ್ತು.
ಕ್ರೀಡಾಕೂಟದ ಅಂಗವಾಗಿ ಹಗ್ಗಜಗ್ಗಾಟ, ವಾಲಿಬಾಲ್‌, ಕೆಸರು ಗದ್ದೆ ಓಟ, ಹಿಮ್ಮುಖ ಓಟ, ಹಾಳೆ ಎಳೆತ, ಜೋಡಿ ಓಟ, ತ್ರೋ ಬಾಲ್‌ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಉಡುಪಿ ಟಿಎಂಎ ಪೈ ಆಸ್ಪತ್ರೆಯ ಮುಖ್ಯಸ್ಥ ಡಾ. ಶಶಿಕಿರಣ್‌ ಉಮಾಕಾಂತ್‌ ಮಾತನಾಡಿ,
ಮಕ್ಕಳಿಗೆ ಗ್ರಾಮೀಣ ಕ್ರೀಡಾಕೂಟಗಳನ್ನು ಪರಿಚಯಿಸಲು ಕೆಸರ ಗೆದ್ದೆಯಂತಹ ಕಾರ್ಯಕ್ರಮ ಸಹಕಾರಿಯಾಗಲಿವೆ. ಹೀಗಾಗಿ ಇಂಥ ಕ್ರೀಡಾಕೂಟಗಳು ಹೆಚ್ಚೆಚ್ಚು ಆಯೋಜಿಸುವ ಮೂಲಕ ಯುವಜನರಿಗೆ ಗ್ರಾಮೀಣ ಸಂಪ್ರದಾಯ, ಕ್ರೀಡೆಗಳ ಅರಿವು ಮೂಡಿಸಬೇಕು ಎಂದರು.ಉದ್ಯಮಿ ಭೀಮ ಸಿಂಗ್‌ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಸಾರ್ವಜನಿಕ ಶ್ರೀ‌ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪಿ. ವಸಂತ ಭಟ್‌, ಕೆಸರು ಗದ್ದೆಯ ಮಾಲೀಕ ಶೇಖರ್‌ ಕಡಿಯಾಳಿ, ಮನೋಹರ ಕಡಿಯಾಳಿ ಮೊದಲಾದವರು ಉಪಸ್ಥಿತರಿದ್ದರು.
ಕ್ರೀಡಾಕೂಟದ ಅಂಗವಾಗಿ ತಯಾರಿಸಿದ್ದ ಗಂಜಿ, ತಿಮರೆ ಚಟ್ನಿ, ಪತ್ರೋಡೆ, ಸಂಡಿಗೆ,
ಹುರುಳಿ ಚಟ್ನಿಯನ್ನು ಸಾರ್ವಜನಿಕರು ಸವಿದರು.
ವಲ್ಲಭ ಭಟ್‌ ಸ್ವಾಗತಿಸಿ, ಸತೀಶ್‌ ವಂದಿಸಿದರು. ರಾಘವಂದ್ರ ಕಿಣಿ ಕಾರ್ಯಕ್ರಮ ನಿರೂಪಿಸಿದರು.