ಕಾರ್ಕಳ: ಕಳೆದ ಮೂರುವರೆ ವರ್ಷಗಳಿಂದ ಅಳಿವಿನಂಚಿನಲ್ಲಿದ್ದ ಉಡುಪಿ ಸೀರೆ ನೇಕಾರಿಕೆ ಪುನಶ್ಚೇತನಕ್ಕೆ ಶ್ರಮಿಸುತ್ತಿರುವ ಕದಿಕೆ ಟ್ರಸ್ಟ್ ಈ ಸಲದ ನಬಾರ್ಡ್ ಮುಂಬೈ ಮುಖ್ಯ ಕಚೇರಿಯಿಂದ ಕೈಮಗ್ಗ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಂಸ್ಥೆಗಳಲ್ಲಿ ಒಂದು ಎಂಬುದಾಗಿ ರಾಷ್ಟ್ರ ಮಟ್ಟದಲ್ಲಿ ಆಯ್ಕೆ ಆಗಿದೆ.
ಆಗಸ್ಟ್ 6 ರಂದು ನಡೆದ ಈ ಆನ್ಲೈನ್ ಕಾರ್ಯಕ್ರಮದಲ್ಲಿ ಕೊಡಲಾದ ಈ ಪ್ರಶಸ್ತಿಯನ್ನು ಆ.16 ರಂದು ಕಿನ್ನಿಗೋಳಿಯ ತಾಳಿಪಾಡಿ ನೇಕಾರ ಸಂಘದಲ್ಲಿ ನಡೆದ ರಾಷ್ಟ್ರೀಯ ಕೈಮಗ್ಗ ಸಪ್ತಾಹ ಆಚರಣೆಯ ಸಂದರ್ಭದಲ್ಲಿ ದ ಕ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಅವರು ನಬಾರ್ಡ್ ಡಿ ಡಿ ಎಮ್ ಸಂಗೀತ ಕರ್ತ ಅವರ ಉಪಸ್ಥಿತಿಯಲ್ಲಿ ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ ಅವರಿಗೆ ನೀಡಿ ಗೌರವಿಸಿದರು.
ನಬಾರ್ಡ್ ಬೆಂಬಲದಲ್ಲಿ ಕದಿಕೆ ಟ್ರಸ್ಟ್ ಮತ್ತು ತಾಳಿಪಾಡಿ ನೇಕಾರ ಸಂಘ ಆಯೋಜಿಸಿದ ಕೈಮಗ್ಗ ಸಪ್ತಾಹ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಯವರು ದ ಕ ಜಿಲ್ಲೆಯಲ್ಲಿ ಕೈಮಗ್ಗ ಕ್ಷೇತ್ರಕ್ಕೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದರು. ಕದಿಕೆ ಟ್ರಸ್ಟ್ ಮತ್ತು ತಾಳಿಪಾಡಿ ನೇಕಾರ ಸಂಘದ ಉಡುಪಿ ಸೀರೆ ನೇಕಾರಿಕೆಯ ಪುನಶ್ಚೇತನದ ಕೆಲಸವನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಕದಿಕೆ ಟ್ರಸ್ಟ್ ನೇಕಾರಿಕೆಗೆ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಯಾದ ನೇಕಾರ ರತ್ನ ಪ್ರಶಸ್ತಿಯನ್ನು ತಾಳಿಪಾಡಿ ಸಂಘದ ಅತ್ಯಂತ ಕುಶಲ ನೇಕಾರ ಶ್ರೀ ಸಂಜೀವ ಶೆಟ್ಟಿಗಾರ್ ಅವರಿಗೆ ಜಿಲ್ಲಾಧಿಕಾರಿಯವರು ಪ್ರದಾನ ಮಾಡಿದರು. ಕುಟ್ಟಿ ಶೆಟ್ಟಿಗಾರ್ ಮತ್ತು ಲಕ್ಷ್ಮಿ ಅವರಿಗೆ ಉತ್ತಮ ನೇಕಾರ ಪ್ರಶಸ್ತಿ ಕೊಡಲಾಯಿತು. ಎಂಭತ್ತು ಕೌಂಟ್ ನ ನೇಕಾರ ಶ್ರೀ ವೆಂಕಟೇಶ್ ಮತ್ತು ಹಾಸು ಮಾಡುವ ಶ್ರೀ ದಾಮೋದರ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು.
19 ಜನ ನೇಕಾರರು ತಾವೇ ನೇಯ್ದ ಸಹಜ ಬಣ್ಣದ ಸೀರೆ ಧರಿಸಿ ಹೆಮ್ಮೆಯಿಂದ ರಾಂಪ್ ವಾಕ್ ಮಾಡಿದರು.
ಆ ಮೇಲೆ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಈ ಸಂದರ್ಭದಲ್ಲಿ ಸೆಲ್ಕೋ ಫೌಂಡೇಶನ್ನ ಎ ಜಿ ಎಮ್ ಗುರುಪ್ರಕಾಶ್ ಶೆಟ್ಟಿ, ತಾಳಿಪಾಡಿ ಸಂಘದ ಅಧ್ಯಕ್ಷ ಆನಂದ ಶೆಟ್ಟಿಗಾರ್, ನೇಕಾರ ಮುಖಂಡರಾದ ಜಯರಾಮ್ ಶೆಟ್ಟಿಗಾರ್, ಭುವನ ಪ್ರಸಾದ ಹೆಗ್ಡೆ ಮಣಿಪಾಲ ಕದಿಕೆ ಟ್ರಸ್ಟ್ನ ಟ್ರಸ್ಟೀಗಳಾದ, ಶ್ರೀಕುಮಾರ್, ಅನೀಲ್ ಹೆಗ್ಡೆ, ಸಚಿನ್ ಹಾಗೂ ತಾಳಿಪಾಡಿ ಸಂಘದ ಆಡಳಿತ ನಿರ್ದೇಶಕ ಮಾಧವ ಶೆಟ್ಟಿಗಾರ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಕದಿಕೆ ಟ್ರಸ್ಟ್ ಕಾರ್ಯದರ್ಶಿ ಬಿ.ಚಿಕ್ಕಪ್ಪ.ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು.
ಮರಳಿ ನೇಕಾರಿಕೆಗೆ: ಕದಿಕೆ ಟ್ರಸ್ಟ್ ನಶಿಸಿ ಹೋಗುತಿದ್ದ ಉಡುಪಿ ಸೀರೆ ನೇಕಾರಿಕೆಯ ಪುನಶ್ಚೇತನ ಆರಂಭಿಸಿದಾಗ ತಾಳಿಪಾಡಿ ಸಂಘದಲ್ಲಿ ಎಂಟು ಇದ್ದ ನೇಕಾರ ಸಂಖ್ಯೆ ಈಗ 34 ಆಗಿದೆ. ಹಲವರು ನೇಕಾರರು ಮರಳಿ ನೇಕಾರಿಕೆಗೆ ಬಂದಿದ್ದಾರೆ. ಕದಿಕೆ ಟ್ರಸ್ಟ್ ನಬಾರ್ಡ್ ಸಹಾಯದೊಂದಿಗೆ ತಾಳಿಪಾಡಿ ಸಂಘದಲ್ಲಿ 19 ಜನರಿಗೆ ತರಬೇತಿ ನೀಡಿದೆ. ಚಿಕ್ಕ ವಯಸ್ಸಿನವರೂ ಇದರಲ್ಲಿ ತರಬೇತಿ ಪಡೆದಿದ್ದಾರೆ.ಎರಡು ದಶಕಗಳ ನಂತರ ನೇಕಾರಿಕೆ ತರಬೇತಿಗೆ ಯುವ ಜನರು ಬರುತಿದ್ದಾರೆ. ಎರಡು ಜಿಲ್ಲೆಗಳಲ್ಲಿ ಒಟ್ಟು ನೇಕಾರ ಸಂಖ್ಯೆ 70 ಕ್ಕಿಂತ ಹೆಚ್ಚಾಗಿದೆ.