ಉಡುಪಿ: ಕಳೆದ ಏಳು ವರ್ಷಗಳ ಹಿಂದೆ ಕಡೆಕಾರು ಗ್ರಾಮದ ಪಟೇಲ್ ತೋಟ ಎಂಬಲ್ಲಿ ನಡೆದ ರಂಜಿತ (19) ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಇಂದು ಜೀವಿತಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಪಟೇಲ್ ತೋಟದ ನಿವಾಸಿ ಯೋಗೀಶ್ (32) ಜೀವಿತಾವಧಿ ಶಿಕ್ಷೆಗೆ ಗುರಿಯಾದ ಆರೋಪಿ.
ಘಟನೆಯ ವಿವರ:
ಆರೋಪಿ ಯೋಗೀಶ್ ತನ್ನ ಮನೆಯ ಹತ್ತಿರದ ನಿವಾಸಿಯಾಗಿದ್ದ ಸುಮತಿ ಎಂಬುವವರ ಮಗಳು 19 ವರ್ಷ ಪ್ರಾಯದ ರಂಜಿತಾಳನ್ನು ದಾರಿ ಮಧ್ಯೆ ಅಡ್ಡಗಟ್ಟಿ ತನ್ನನ್ನು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದನು. ಅಲ್ಲದೆ, ಮೈಕೈ ಮುಟ್ಟಿ, ಚುಡಾಯಿಸುತ್ತಿದ್ದನು. ಕೆಟ್ಟ ಸನ್ನೆಗಳನ್ನು ಮಾಡುತ್ತಿದ್ದನು. ಇದನ್ನು ಆಕೆ ವಿರೋಧಿಸಿದಾಗ ‘ನೀನು ಒಬ್ಬಳೇ ಸಿಕ್ಕಿದಾಗ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ’ ಎಂದು ಜೀವ ಬೆದರಿಕೆಯೊಡ್ಡಿ ಕಿರುಕುಳ ನೀಡಿದ್ದನು. ಯೋಗೀಶನ ದೌರ್ಜನ್ಯ ಸಹಿಸಲಾಗದೆ ರಂಜಿತಾಳು, 2013ರ ಸೆಪ್ಟೆಂಬರ್ 28ರಂದು ಮಲ್ಪೆ ಠಾಣೆಯಲ್ಲಿ ಆತನ ವಿರುದ್ಧ ದೂರು ದಾಖಲಿಸಿರುತ್ತಾಳೆ.
ಆ ಬಳಿಕ ಯೋಗೀಶನಿಗೆ ರಂಜಿತಾಳ ಬಗ್ಗೆ ದ್ವೇಷ ಹುಟ್ಟಿಕೊಂಡಿತ್ತು. 2013ರ ನವೆಂಬರ್ 27ರಂದು ಬೆಳಿಗ್ಗೆ 9.30 ರ ಸುಮಾರಿಗೆ ರಂಜಿತಳು ತನ್ನ ಸ್ನೇಹಿತೆಯ ಮನೆಯ ಬಳಿ ಬಂದು ಆಕೆಯೊಂದಿಗೆ ಮಾತನಾಡುತ್ತಿದ್ದಳು. ಈ ವೇಳೆ ಅಲ್ಲಿಯೇ ಪಕ್ಕದ ನಿವಾಸಿಯಾಗಿದ್ದ ಆರೋಪಿ ಯೋಗೀಶ್ ಕೈಯಲ್ಲಿ ಚೂರಿಯೊಂದನ್ನು ಹಿಡಿದುಕೊಂಡು ಬಂದು ರಂಜಿತಾಳ ಬೆನ್ನಿಗೆ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ್ದನು. ತೀವ್ರವಾಗಿ ಗಾಯಗೊಂಡಿದ್ದ ರಂಜಿತಾಳನ್ನು ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯುವ ವೇಳೆ ದಾರಿ ಮಧ್ಯೆ ಆಕೆ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಳು.
ದೂರು ದಾಖಲಿಸಿಕೊಂಡಿದ್ದ ಮಲ್ಪೆ ಠಾಣೆ ಪೊಲೀಸರು 2013ರ ಡಿಸೆಂಬರ್ 1ರಂದು ಆರೋಪಿ ಯೋಗೀಶ್ ನನ್ನು ಬಂಧಿಸಿದ್ದರು. ಆರೋಪಿ ವಿರುದ್ಧ ಅಂದಿನ ವೃತ್ತ ನಿರೀಕ್ಷಕ ಮಾರುತಿ ಜಿ. ನಾಯ್ಕ್ 2014ರ ಫೆಬ್ರುವರಿ 14ರಂದು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ವಿಚಾರಣಾವಧಿಯಲ್ಲಿ ಆರೋಪಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದನು. ಆದರೆ ಪ್ರಕರಣದ ಗಂಭೀರತೆಯನ್ನು ಅರಿತ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಹಲವು ಸಾಕ್ಷಿಗಳನ್ನು ವಿಚಾರಣೆ ನಡೆಸಿದ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ ಅವರು ಸೆ. 14ರಂದು ಆರೋಪಿ ದೋಷಿಯೆಂದು ಅಭಿಪ್ರಾಯಪಟ್ಟಿದ್ದರು.
ಶಿಕ್ಷೆಯ ಪ್ರಮಾಣವನ್ನು ಸೆ. 16ಕ್ಕೆ ಮುಂದೂಡಿದ್ದರು. ಅದರಂತೆ ಇಂದು ಆರೋಪಿಗೆ ಜೀವಿತಾವಧಿ ಜೈಲು ಶಿಕ್ಷೆ ನೀಡಿ ತೀರ್ಪು ನೀಡಿದ್ದಾರೆ. ಈ ವೇಳೆ ಸರ್ಕಾರದ ಪರವಾಗಿ ಜಿಲ್ಲಾ ವಿಶೇಷ ಸರ್ಕಾರಿ ಅಭಿಯೋಜಕಿ ಶಾಂತಿ ಬಾಯಿ ವಾದ ಮಂಡಿಸಿದ್ದರು.