ಕುಂದಾಪುರ:ಸಮುದ್ರದಲ್ಲಿ ತೇಲಿ ಬಂತು ಕಡವೆಯ ಮೃತ ದೇಹ

ಕುಂದಾಪುರ: ಮೃತ ಕಡವೆಯೊಂದರ ಶವ ಸಮುದ್ರದಲ್ಲಿ ತೇಲಿ ಬಂದ ಘಟನೆ ಮಂಗಳವಾರ ಬೆಳಗ್ಗೆ ಕುಂದಾಪುರ ತಾಲೂಕಿನ ಕುಂಭಾಸಿ ಸಮೀಪದ ಕೊರವಡಿ ಎಂಬಲ್ಲಿ ನಡೆದಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ವಿಪರೀತ ಮಳೆಯಾಗಿದ್ದು ಅಲ್ಲಲ್ಲಿ ನೆರೆ ಬಂದಿದೆ. ಕಡವೆಯು ಮಳೆಯ ನೀರಿನಲ್ಲಿ ಕೊಚ್ಚಿಹೋಗಿ ಹೊಳೆಯ ಮೂಲಕ ಸಮುದ್ರ ಸೇರಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.
ಮುಂಜಾನೆ ಸಮುದ್ರ ಕಿನಾರೆಯಲ್ಲಿ ಬಿದ್ದಿದ್ದ ಕಡವೆ ಮೃತದೇಹ ಕಂಡ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಕಡವೆಯ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಸುಟ್ಟುಹಾಕಿದ್ದಾರೆ.
ಸುಮಾರು 3-4 ವರ್ಷ ಪ್ರಾಯದ ಗಂಡು ಕಡವೆ ಅದಾಗಿತ್ತು. ಸ್ಥಳಕ್ಕೆ ಕುಂದಾಪುರ ಎಸಿಎಫ್ ಲೋಹಿತ್, ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಉಪವಲಯ ಅರಣ್ಯಾಧಿಕಾರಿ ಉದಯ್‌, ಅರಣ್ಯ ರಕ್ಷಕ ಶಂಕರ ಖಾರ್ವಿ, ಸೋಮಶೇಖರ್, ಇಲಾಖೆ ಜೀಪು ಚಾಲಕ ಅಶೋಕ್ ಹಾಗೂ ಸ್ಥಳೀಯರು ಭೇಟಿ ನೀಡಿದ್ದರು.