ಕಾಬೂಲ್​ನಲ್ಲಿ ಸಾವಿನ ಸಂಖ್ಯೆ 90ಕ್ಕೆ ಏರಿಕೆ

ಅಪ್ಘಾನಿಸ್ತಾನದ ಕಾಬೂಲ್​ ವಿಮಾನ ನಿಲ್ದಾಣ ದಲ್ಲಿ ನಡೆದ ಅವಳಿ ಆತ್ಮಾಹುತಿ ಬಾಂಬ್​ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 90ಕ್ಕೆ ಏರಿಕೆಯಾಗಿದ್ದು, ಸುಮಾರು 150 ಮಂದಿ ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಐಸಿಸ್​-ಕೆ(ಇಸ್ಲಾಮಿಕ್​ ಸ್ಟೇಟ್​​​-ISIS) ಹೊತ್ತುಕೊಂಡಿದೆ. ಗುರುವಾರ ಸಂಜೆ ಕಾಬೂಲ್​​ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಒಂದು ಸ್ಪೋಟ ಸಂಭವಿಸಿತ್ತು. ಬಳಿಕ ರಾತ್ರಿಯೇ ಮತ್ತೊಂದು ಸ್ಪೋಟ ಸಂಭವಿಸಿತ್ತು. ಆಗ 12 ಮಂದಿ ಅಮೆರಿಕ ಮಿಲಿಟರಿ ಸಿಬ್ಬಂದಿ ಹಾಗೂ ಅನೇಕ ಸೇವಾ ಸಿಬ್ಬಂದಿ ಸೇರಿದಂತೆ ಸುಮಾರು ಜನರು ಈ ದುರಂತದಲ್ಲಿ ಸಾವನ್ನಪ್ಪಿದ್ದರು.

ಅಮೆರಿಕ ನೇತೃತ್ವದ ಸೇನಾ ಪಡೆಗಳ ಹಿಂತೆಗೆತ ಕಾರ್ಯಾಚರಣೆ ನಡೆಯುತ್ತಿದ್ದಾಗ ತಾಲಿಬಾನ್​ ಆಡಳಿತವಿರುವ ಅಪ್ಘಾನಿಸ್ತಾನದಲ್ಲಿ ಈ ಅವಳಿ ಸ್ಫೋಟ ಸಂಭವಿಸಿತ್ತು. ಬಾಂಬರ್​​ಗಳು ಎಲ್ಲಾ ಭದ್ರತಾ ತಡೆಗೋಡೆಗಳನ್ನೂ ದಾಟಿ ಅಮೆರಿಕ ಪಡೆಗಳಿರುವ ಪ್ರದೇಶಕ್ಕಿಂತ 16 ಅಡಿ ದೂರದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸುವುದಕ್ಕೆ ಓರ್ವ ಬಾಂಬರ್ ಗೆ ಸಾಧ್ಯವಾಗಿದೆ ಎಂದು ಉಗ್ರ ಸಂಘಟನೆಯ ಪ್ರಚಾರ ವಿಭಾಗ ಹೇಳಿದೆ. ಹೇಳಿಕೆಯಲ್ಲಿ ಓರ್ವ ಬಾಂಬರ್ ಹಾಗೂ ಒಂದು ಸ್ಫೋಟದ ಬಗ್ಗೆಯಷ್ಟೇ ಮಾಹಿತಿ ನೀಡಲಾಗಿದೆ. ಆದರೆ ಘಟನೆಯಲ್ಲಿ ಕನಿಷ್ಟ 2 ಬಾಂಬ್ ಸ್ಫೋಟಗೊಂಡಿರುವುದು ಪತ್ತೆಯಾಗಿದೆ.