ಭಾರೀ ಮಳೆಗೆ ಕುಸಿದು ಬಿತ್ತು ಕಬ್ಬಿನಾಲೆ ಮತ್ತಾವು ಸೇತುವೆ: ದಾರಿ ಕಾಣದೇ ಕಂಗಾಲಾದ್ರು ಗ್ರಾಮಸ್ಥರು!

ವರದಿ -ರಾಮ್ ಅಜೆಕಾರು ಕಾರ್ಕಳ
ಕಾರ್ಕಳ: ಎಡೆಬಿಡದೆ ಸುರಿಯುತ್ತಿರುವ ಗಾಳಿ ಮಳೆಗೆ ಮುದ್ರಾಡಿ ಗ್ರಾಮ ಪಂಚಾಯತಿ ವ್ಯಾಪ್ತಿ ಯ ಕಬ್ಬಿನಾಲೆ ಮತ್ತಾವು ಮರದ ಸೇತುವೆಯು ನೀರಿನ ಹೊಡೆತಕ್ಕೆ ಸಿಲುಕಿ  ಕೊಚ್ಚಿಕೊಂಡೇ ಹೋಗಿದೆ.
ವರುಣನ ಆರ್ಭಟ ಕ್ಕೆ ಸಿಲುಕಿದ  ಮರದ ಸೇತುವೆಯ ದಿಮ್ಮಿಗಳು ಚೆಲ್ಲಾಪಿಲ್ಲಿಯಾಗಿ ಕೊಚ್ಚಿಹೋಗಿದ್ದು ಜನರು ಅತ್ತಿತ್ತ ಸಾಗಲಾಗದೆ  ಕಂಗಾಲಾಗಿದ್ದಾರೆ.
ನದಿ ನೀರಿನ ಮಟ್ಟ ದಿನನಿತ್ಯ ಹೆಚ್ಚುತ್ತಿದೆ.  ಶಾಲೆಗೆ ಹೋಗುತ್ತಿದ್ದ ಮಕ್ಕಳಿಗೆ ಮರದ ಸೇತುವೆ ಆಧಾರಕೊಂಡಿಯಾಗಿತ್ತು.  ಸರಿ ಸುಮಾರು ನೂರಕ್ಕೂ ಹೆಚ್ಚು ಜನರು ಮತ್ತಾವು ಪರಿಸರದಲ್ಲಿ ವಾಸಿಸುತ್ತಿದ್ದು  ದಿನನಿತ್ಯದ ಸಂಚಾರಕ್ಕಾಗಿ ಬವಣೆ ಪಡಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ.
ಮಳೆಗಾಲದ ಸಾಹಸ:
ನದಿಯ ಇನ್ನೊಂದು ಬದಿ ತಲುಪಲು ಹಗ್ಗ ದ ಸಹಾಯದಿಂದ ಜನರನ್ನು ನದಿ ದಾಟಿಸುತ್ತಿದ್ದ ಕರುಣಾ ಜನಕ ಸ್ಥಿತಿ ಕಂಡು ನಿಜಕ್ಕೂ ಸಾಹಸವಾಗಿ ತೋರುತ್ತಿದೆ. ಹಗ್ಗದಲ್ಲಿ  ಜೀವದ ಹಂಗು ತೊರೆದು ಸಾಗಬೇಕಾದ ಸ್ಥಿತಿ  ದೇವರಿಗೆ ಪ್ರೀತಿ.
ಜನರ ಗೋಳು ಕೇಳೋರು ಯಾರು:
 ಕಬ್ಬಿನಾಲೆ ಮತ್ತಾವು ಪ್ರದೇಶ ಕೆಲವು ವರ್ಷಗಳ ಹಿಂದೆ ನಕ್ಸಲ್ ಚಟುವಟಿಕೆಯ ತಾಣವಾಗಿತ್ತು. ಸರಕಾರಿ ಇಲಾಖೆಗೆ ಸಂಬಧಿಸಿದ ಜೀಪ್ ಗೆ ನಾಡ ಬಾಂಬ್ ಇಟ್ಟು ಸ್ಫೋಟಿಸಿದ ಮೊದಲ ಪ್ರಕರಣ ದಾಖಲಾಗಿದ ಪ್ರದೇಶವಾಗಿದೆ.
ಮತ್ತಾವು  ಹೊಸ ಸೇತುವೆ ಕಾಮಗಾರಿ ಅಡಿಯಲ್ಲಿ  ಮತ್ತಾವು ಹೊಸ ಸೇತುವೆ ನಿರ್ಮಾಣ ಮಾಡಲು ಅನುದಾನ ಬಿಡುಗಡೆಗೊಂಡಿದ್ದು ಕುದುರೆಮುಖ ವ್ಯಾಪ್ತಿಯ  ಅರಣ್ಯ ಇಲಾಖೆ ಒಪ್ಪಿಗೆಗೆ ಕಳುಹಿಸಲಾಗಿದೆ. ಆದರೆ ಸಾಕಾರಗೊಳ್ಳಲು ನಿಧಾನವಾಗುತ್ತಿದೆ.ಈ ನಿಧಾನಗತಿಯಿಂದಾಗಿಯೇ ಇಲ್ಲಿನ ಗ್ರಾಮಸ್ಥರ ಜೀವನ ಭಯಾನಕವಾಗಿ ಪರಿಣಮಿಸಿದೆ.ಆದರೂ ಇವರ ಮಳೆಗಾಲದ ಕಷ್ಟ-ನೋವು ಜನಪ್ರತಿನಿಧಿಗಳಿಗೆ ಬೇಕಾಗಿಲ್ಲ.
ಇದೀಗ ಅಡಿಕೆ ಮರದ ತುಂಡುಗಳನ್ನಿಟ್ಟು ತಾತ್ಕಾಲಿಕ ಮರದ ಸೇತುವೆ ನಿರ್ಮಾಣಕ್ಕೆ ತಯಾರಿ ನಡೆಸುತ್ತಿದ್ದಾರೆ ಇಲ್ಲಿನ ಗ್ರಾಮಸ್ಥರು. ಆದರೆ ನೀರಿನ ಸೆಳೆತ ಬಿಗುವಾಗಿ ಹರಿಯುತ್ತಿದ್ದು ಒತ್ತಡದಿಂದ ಕಾಮಗಾರಿ ಸ್ಥಗಿತ ಗೊಂಡಿದೆ.