ಕೆ. ಆರ್.ಎಸ್ ನೀರಿನ ಮಟ್ಟ 80 ಅಡಿಗೆ ಕುಸಿತದ ಪರಿಣಾಮ ಶತಮಾನದ ಲಕ್ಷ್ಮೀ ನಾರಾಯಣಸ್ವಾಮಿ ದೇಗುಲ ಗೋಚರ

ಮಂಡ್ಯ:ಮಂಡ್ಯ ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ ಏಪ್ರಿಲ್ 20 ರಂದು 90 ಅಡಿಗೆ ಕುಸಿದಿತ್ತು. ಇದೀಗ ಮತ್ತಷ್ಟು ಕುಸಿತ ಕಂಡಿದೆ. ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ 80 ಅಡಿಗೆ ಕುಸಿದಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಮುಂಗಾರು ಪೂರ್ವ ಅಕಾಲಿಕ ಮಳೆ ಕೊರತೆಯಿಂದ ಈ ಬಾರಿ ಜಲಾಶಯದ ನೀರಿನ ಮಟ್ಟದಲ್ಲಿ 22 ಅಡಿಗಳಷ್ಟು ಕಡಿಮೆ ನೀರು ಸಂಗ್ರಹವಾಗಿರುವುದು ಕಂಡುಬಂದಿದೆ. ಹಿನ್ನೀರಿನಲ್ಲಿ ಮುಳುಗಡೆ ಆಗಿದ್ದ ಶ್ರೀ ಲಕ್ಷ್ಮಿ ನಾರಾಯಣಸ್ವಾಮಿ ದೇವಸ್ಥಾನ ಗೋಚರಿಸಿದೆ. ಜನರಲ್ಲಿ ಬರದ ಆತಂಕ ಮನೆಮಾಡಿದೆ.

ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದ್ದು, ಇಂದು 80.78 ಅಡಿಯಷ್ಟು ನೀರು ಸಂಗ್ರಹವಿತ್ತು. ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ 104.77 ಅಡಿ ನೀರು ಸಂಗ್ರಹವಿತ್ತು. ಪ್ರಸ್ತುತ ಜಲಾಶಯಕ್ಕೆ 404 ಕ್ಯುಸೆಕ್ ನೀರು ಮಾತ್ರ ಹರಿದು ಬರುತ್ತಿದ್ದು, ಅಣೆಕಟ್ಟೆಯಿಂದ 3,113 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ಒಳಹರಿವು 2,872 ಕ್ಯುಸೆಕ್ ಇದ್ದು, 2,251 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿತ್ತು. ಏಪ್ರಿಲ್ 20 ರಂದು 90 ಅಡಿಗೆ ಕುಸಿದಿತ್ತು. ಆದರೆ ಇದೀಗ 80 ಅಡಿಗಳ ಅಂತರಕ್ಕೆ ಕುಸಿದಿದೆ.

: ಈಹಿಂದಿನ ವರ್ಷದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಮುಂಗಾರು ಪೂರ್ವ ಅಕಾಲಿಕ ಮಳೆ ಉತ್ತಮವಾಗಿ ಸುರಿದು ಜಲಾಶಯಕ್ಕೆ ಹೆಚ್ಚು ನೀರು ಹರಿದು ಬಂದಿತ್ತು. ಇದರಿಂದಾಗಿ ಬೇಸಿಗೆಯಲ್ಲಿ ಜಲಾಶಯದ ಒಳಹರಿವಿನ ಪ್ರಮಾಣವೂ ಹೆಚ್ಚಾಗಿತ್ತು. ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ದಿನ ಕಳೆದಂತೆ ಜಲಾಶಯದ ನೀರಿನ ಮಟ್ಟ ಕುಸಿಯತೊಡಗಿದೆ. ಬೇಸಿಗೆ ಮುಗಿಯುವರೆಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದು ಎನ್ನುತ್ತಾರೆ ಅಧಿಕಾರಿಗಳು.

ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರಾಜ್ಯದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯ ನಡುವೆಯೂ ಬರಗಾಲದ ಸಮಯದಲ್ಲಿ ಕೆಆರ್‌ಎಸ್ ಅಣೆಕಟ್ಟು ನಿರ್ಮಿಸಿದ್ದರು. ನವೆಂಬರ್ 1911 ರಲ್ಲಿ ನಿರ್ಮಾಣ ಶುರುವಾಗಿತ್ತು. 10,000 ಕೆಲಸಗಾರರು ನಿರ್ಮಾಣದಲ್ಲಿ ಭಾಗವಹಿಸಿದ್ದರು. ಸುರ್ಕಿ ಗಾರೆಯನ್ನು ಸಿಮೆಂಟ್ ಬದಲಿಗೆ ಬಳಸಲಾಗಿತ್ತು. ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಮೆಂಟ್ ವಿದೇಶದಿಂದ ಆಮದು ಮಾಡಿಕೊಳ್ಳುವುದು ರಾಜ್ಯಕ್ಕೆ ದುಬಾರಿಯಾಗಿತ್ತು. 1931 ರಲ್ಲಿ ನಿರ್ಮಾಣ ಪೂರ್ಣಗೊಂಡ ಬಳಿಕ ಜಲಾಶಯ ಯೋಜನೆಯಿಂದ ಸುಮಾರು 5,000 ರಿಂದ 10,000 ಕುಟುಂಬಗಳು ಮನೆ ಜಮೀನು ಕಳೆದುಕೊಂಡಿದ್ದರು. ಆಗ ಸರ್ಕಾರ ಅಕ್ಕಪಕ್ಕದ ಪ್ರದೇಶಗಳಲ್ಲಿ ಜನರಿಗೆ ಪುನರ್ವಸತಿ ಕಲ್ಪಿಸಿ ಕೃಷಿ ಭೂಮಿ ಒದಗಿಸಿತ್ತು.

ಲಕ್ಷ್ಮಿ ನಾರಾಯಣ ಸ್ವಾಮಿ ದೇಗುಲ ಗೋಚರ: ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿದ ಪರಿಣಾಮ ಡ್ಯಾಂ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಶ್ರೀ ಲಕ್ಷ್ಮಿ ನಾರಾಯಣಸ್ವಾಮಿ ದೇವಾಲಯ 5 ವರ್ಷದ ನಂತರ ಮತ್ತೆ ಕಾಣಿಸಿಕೊಂಡಿದೆ. ಶತ ಶತಮಾನದಷ್ಟು ಹಳೆಯ ದೇವಾಲಯ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿತ್ತು. ಸಾಮಾನ್ಯವಾಗಿ, 85 ಅಡಿಗಿಂತ ಕಡಿಮೆ ಪ್ರಮಾಣದಲ್ಲಿ ನೀರಿನ ಕುಸಿತ ಕಂಡುಬಂದಲ್ಲಿ ಈ ದೇವಾಲಯ ಕಾಣುತ್ತದೆ.

ದೇಗುಲ ನೋಡಲು ಮುಗಿಬಿದ್ದ ಜನ: ಕೆಆರ್ಎಸ್ ಜಲಾಶಯ ಪ್ರದೇಶ ವ್ಯಾಪ್ತಿಯ ಆನಂದೂರು ಸೇರಿ ಸುತ್ತಲಿನ ಗ್ರಾಮದ ಜನರು ತಮ್ಮ ಆರಾಧ್ಯದೈವ ಲಕ್ಷ್ಮಿನಾರಾಯಣ ಸ್ವಾಮಿಗೆ ಪೂಜೆ ಸಲ್ಲಿಸುತ್ತಿದ್ದರು. ಕೆಆರ್ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗಿ ಹಿನ್ನೀರಿನೊಳಗೆ ದೇವಾಲಯ ಮುಳುಗಿತು. ಆನಂದೂರು ಸೇರಿ ಸುತ್ತಲಿನ ಗ್ರಾಮದ ಜನರ ದೇವಾಲಯದಲ್ಲಿದ್ದ ಶ್ರೀ ಲಕ್ಷ್ಮಿನಾರಾಯಣ ಸ್ವಾಮಿ ವಿಗ್ರಹವನ್ನು ಸಮೀಪದ ಮಜ್ಜಿಗೆಪುರದ ನೂತನ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲು ಶುರು ಮಾಡಿದ್ದರು. ಈ ಹಿಂದೆ ಹಿನ್ನೀರಿನಲ್ಲಿ ಮುಳುಗಿದ್ದ ಶ್ರೀ ಲಕ್ಷ್ಮಿನಾರಾಯಣ ಸ್ವಾಮಿ ದೇವಾಲಯ ಗೋಚರವಾಗಿದ್ದು, ವಾಸ್ತುಶಿಲ್ಪ ವೈಭವ ನೋಡಲು ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.