ಕುಂದಾಪುರ: ನದಿಗೆ ಹಾರಿದ ಉದ್ಯಮಿಯ ಮೃತದೇಹ ಪತ್ತೆ

ಕುಂದಾಪುರ: ಭಾನುವಾರ ಪಂಚಾಗಂಗಾವಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೊಟೇಲ್ ಉದ್ಯಮಿಯೋರ್ವರ ಮೃತದೇಹ ಸೋಮವಾರ ಬೆಳಿಗ್ಗೆ ಹೆಮ್ಮಾಡಿ ಸಮೀಪದ ಬುಗ್ರಿಕಡು ನದಿಯಲ್ಲಿ ಪತ್ತೆಯಾಗಿದೆ.

ಮುಂಬೈಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಕುಂದಾಪುರ ಚಿಕನ್‌ಸಾಲ್ ರಸ್ತೆಯ ನಿವಾಸಿ ಕೆ.ಜಿ. ಗಣೇಶ್(೪೯) ಮೃತರು.

ಗಣೇಶ್ ಭಾನುವಾರ ಸಂಜೆ ಆಟೋ ರಿಕ್ಷಾದಲ್ಲಿ ಬಂದು ಕುಂದಾಪುರ ಹೇರಿಕುದ್ರು ಸೇತುವೆಯಲ್ಲಿ ಇಳಿದಿದ್ದರು. ತನ್ನ ಆಧಾರ್‌ಕಾರ್ಡ್, ಪರ್ಸ್, ಚಪ್ಪಲಿಯನ್ನು ಸೇತುವೆ ದಂಡೆ ಮೇಲಿರಿಸಿ ಮೇಲಿನಿಂದ ಪಂಚಗಂಗಾವಳಿ ನದಿಗೆ ಧುಮುಕಿದ್ದರು. ಇದನ್ನು ನೋಡಿದ ಸ್ಥಳೀಯರು ನದಿಯಲ್ಲಿ ಹುಡುಕಾಟ ಆರಂಭಿಸಿದ್ದರು. ತಡ ರಾತ್ರಿಯ ತನಕವೂ ಗಣೇಶ್‌ಗಾಗಿ ಅಗ್ನಿ ಶಾಮಕ ದಳ ಸತತ ಹುಡುಕಾಟ ನಡೆಸಿದ್ದರೂ ಅವರ ಸುಳಿವು ಸಿಕ್ಕಿರಲಿಲ್ಲ. ಆದರೆ ಸೋಮವಾರ ಬೆಳಗ್ಗೆ ಗಣೇಶ್ ಮೃತದೇಹ ಹೆಮ್ಮಾಡಿ ಸಮೀಪದ ಬುಗ್ರಿಕಡು ನದಿಯಲ್ಲಿ ಪತ್ತೆಯಾಗಿದೆ. ಬುಗ್ರಿಕಡು ನಿವಾಸಿಗಳು ಕುಂದಾಪುರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಕುಂದಾಪುರ ಪೊಲೀಸ್ ಠಾಣೆಯ ಎಎಸ್‌ಐ ಸುಧಾಕರ್ ಹಾಗೂ ಹೆಡ್‌ಕಾನ್ಸ್‌ಟೇಬಲ್ ಹರೀಶ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮೃತದೇಹವನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಹಲವು ವರ್ಷಗಳ ಹಿಂದ ಮುಂಬೈ ಸೇರಿಕೊಂಡಿದ್ದ ಗಣೇಶ್ ಹಂತ ಹಂತವಾಗಿ ಬೆಳೆದು ಯಶಸ್ವಿ ಹೊಟೇಲ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಖನ್ನತೆ ಒಳಗಾಗಿದ್ದ ಅವರು ಊರಿನಲ್ಲಿ ನೆಲೆಸಿದ್ದರು. ಪತ್ನಿ ಎರಡು ಮಕ್ಕಳ ಸುಖಿ ಸಂಸಾರವನ್ನು ಹೊಂದಿದ್ದ ಗಣೇಶ್ ಆತ್ಮಹತ್ಯೆಗೆ ಕಾರಣ ಏನೆನ್ನುವುದು ಇನ್ನಷ್ಟೆ ತಿಳಿದುಬರಬೇಕಿದೆ.