ಕೆ.ಅಣ್ಣಾಮಲೈ ನಟನೆಯ ಕನ್ನಡ ಚಲನಚಿತ್ರ ‘ಅರಬ್ಬಿ’ಯ ಟ್ರೈಲರ್ ಬಿಡುಗಡೆ

ಬೆಂಗಳೂರು: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ(K. Annamalai) ನಟಿಸಿರುವ ಮೊಟ್ಟ ಮೊದಲ ಕನ್ನಡ ಚಲನಚಿತ್ರ ‘ಅರಬ್ಬಿ’ಯ ಟ್ರೈಲರ್ ಬಿಡುಗಡೆ ಆಗಿದೆ. ಕೈಗಳಿಲ್ಲದ ಕೆ.ಎಸ್ ವಿಶ್ವಾಸ್ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡಿರುವ ನೈಜ ಕಥೆಯನ್ನು ಚಿತ್ರ ಒಳಗೊಂಡಿದೆ.

ಈ ಚಿತ್ರದಲ್ಲಿ ವಿಶ್ವಾಸ್​ ಅವರ ತರಬೇತುದಾರನ ಪಾತ್ರದಲ್ಲಿ ಅಣ್ಣಾಮಲೈ ನಟಿಸಿದ್ದಾರೆ. ಐಪಿಎಸ್ ವೃತ್ತಿಗೆ ವಿದಾಯ ಹೇಳಿದ ಬಳಿಕ ಅಣ್ಣಾಮಲೈ ಕನ್ನಡ ಸಿನಿಮಾ ಒಂದರಲ್ಲಿ ನಟಿಸಿದ್ದರು. ಈಗ ಅದರ ಟ್ರೈಲರ್‌ ಬಿಡುಗಡೆಗೊಂಡಿದೆ. ಅಣ್ಣಾಮಲೈ ಕೆಲವು ಆಕ್ಷನ್ ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ವಿಶ್ವಾಸ್ ತಮ್ಮ ಪಾತ್ರದಲ್ಲಿ ತಾವೇ ನಟಿಸಿದ್ದಾರೆ.

ಕೆಎಸ್ ವಿಶ್ವಾಸ್, ವಿದ್ಯುತ್ ಅವಘಡವೊಂದರಲ್ಲಿ ಎರಡೂ ಕೈಗಳನ್ನು ಕಳೆದುಕೊಂಡಿದ್ದರು. ಇದಾದ ಬಳಿಕ ಅಂತಾರಾಷ್ಟ್ರೀಯ ಈಜುಗಾರಾದರು. ವಿಶ್ವಾಸ್, ನೃತ್ಯ ಹಾಗೂ ಜಿಮ್ನ್ಯಾಸ್ಟಿಕ್ ಸಹ ಬಲ್ಲರು. ಕೈಯಿಲ್ಲದಿದ್ದರೂ ಅಡುಗೆ ಮಾಡಬಲ್ಲರು.

ಆರ್ ರಾಜ್​ಕುಮಾರ್ ಚಿತ್ರವನ್ನು ನಿರ್ದೇಶನ ಮಾಡಿದ್ದು, ಸಿಎಸ್ ಚೇತನ್ ನಿರ್ಮಾಣ ಮಾಡಿದ್ದಾರೆ. ಸಹ ನಿರ್ಮಾಣವನ್ನು ಅನಿತಾ ಸಿದ್ಧೇಶ್ವರ ಮಾಡಿದ್ದಾರೆ.

ಚಿತ್ರಕ್ಕೆ ಸರಿಗಮಪ ಖ್ಯಾತಿಯ ಗಾಯಕ ಕಂಬದ ರಂಗಯ್ಯ ಸಂಗೀತ ನೀಡಿದ್ದಾರೆ. ರಾಜೇಶ್ ಕೃಷ್ಣನ್ ಹಾಗೂ ಚಂದನ್ ಶೆಟ್ಟಿ ಕಂಠದಾನ ಮಾಡಿದ್ದಾರೆ. ಆನಂದ್ ದಿಂಡವಾರ ಛಾಯಾಗ್ರಹಣವಿದೆ.