ನವದೆಹಲಿ: ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಲ್ಲಿಸಿದ್ದ ರಾಜೀನಾಮೆಯನ್ನು ಪಕ್ಷದ ಹೈಕಮಾಂಡ್ ಅಂಗೀಕರಿಸಿದೆ. ಇದರೊಂದಿಗೆ ಬಿಜೆಪಿಯೊಂದಿಗಿನ ಅವರ ಆರು ವರ್ಷಗಳ ಸುದೀರ್ಘ ಸಂಬಂಧಕ್ಕೆ ಅಧಿಕೃತವಾಗಿ ತೆರೆ ಬಿದ್ದಿದೆ.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಅಣ್ಣಾಮಲೈ ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದಾರೆ. ಜೂನ್ 2ರಂದು ಅಣ್ಣಾಮಲೈ ಅವರು ನಿತಿನ್ ನಬಿನ್ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆಯ ನಂತರವೂ ಅವರು ಬಿಜೆಪಿಯಲ್ಲೇ ಮುಂದುವರಿಯಲಿದ್ದಾರೆ ಹಾಗೂ ರಾಜ್ಯಸಭೆಗೆ ಕಳುಹಿಸಲಾಗಬಹುದು ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದ್ದವು. ಆದರೆ ರಾಜೀನಾಮೆ ಅಂಗೀಕಾರದೊಂದಿಗೆ ಆ ಎಲ್ಲ ಚರ್ಚೆಗಳಿಗೆ ತೆರೆ ಬಿದ್ದಂತಾಗಿದೆ.
2021ರಿಂದ 2025ರವರೆಗೆ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅಣ್ಣಾಮಲೈ ಅವರನ್ನು ಪಕ್ಷದ ಭವಿಷ್ಯದ ನಾಯಕ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಇತ್ತೀಚಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಜತೆ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದರ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.
ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸಿದರೆ ಮಾತ್ರ ರಾಜ್ಯದಲ್ಲಿ ಪಕ್ಷದ ಬೆಳವಣಿಗೆ ಸಾಧ್ಯ ಎಂದು ಅಣ್ಣಾಮಲೈ ನಂಬಿದ್ದರು. ಆದರೆ ಎಐಎಡಿಎಂಕೆ ಜತೆ ಮೈತ್ರಿ ಹಾಗೂ ಸೀಟು ಹಂಚಿಕೆ ಪ್ರಕ್ರಿಯೆಯ ಕುರಿತು ಅವರು ಪಕ್ಷದ ವರಿಷ್ಠರ ಮುಂದೆ ತಮ್ಮ ಅಸಮಾಧಾನವನ್ನು ಬಹಿರಂಗಪಡಿಸಿದ್ದರು.
ಇದರ ನಡುವೆಯೂ, ಅಣ್ಣಾಮಲೈ ಅವರು ವ್ಯಕ್ತಪಡಿಸಿರುವ ಸಲಹೆಗಳು ಹಾಗೂ ಕಳವಳಗಳನ್ನು ಪಕ್ಷ ಗಂಭೀರವಾಗಿ ಪರಿಗಣಿಸಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಅವರು ಎತ್ತಿರುವ ವಿಚಾರಗಳನ್ನು ಪಕ್ಷದ ಆಂತರಿಕ ವಿಷಯಗಳೆಂದು ಪರಿಗಣಿಸಲಾಗಿದ್ದು, ಸಂಘಟನೆಯ ಚೌಕಟ್ಟಿನೊಳಗೆ ಅವುಗಳನ್ನು ನಿರ್ವಹಿಸಲಾಗುವುದು ಎಂದು ಹೇಳಲಾಗಿದೆ.
ಅಣ್ಣಾಮಲೈ ಅವರ ನಿರ್ಗಮನವು ತಮಿಳುನಾಡಿನಲ್ಲಿ ಬಿಜೆಪಿಯ ಸಂಘಟನಾ ಚಟುವಟಿಕೆಗಳ ಮೇಲೆ ಪರಿಣಾಮ ಬೀರಬಹುದೇ ಎಂಬ ಚರ್ಚೆಗಳು ಆರಂಭವಾಗಿವೆ. ಆದರೆ ಪಕ್ಷದ ಕೆಲವು ನಾಯಕರು, ಈ ಬೆಳವಣಿಗೆಯಿಂದ ರಾಜ್ಯದಲ್ಲಿನ ಬಿಜೆಪಿಯ ಕಾರ್ಯಚಟುವಟಿಕೆ ಅಥವಾ ಮೈತ್ರಿ ರಾಜಕೀಯದ ಮೇಲೆ ಯಾವುದೇ ಮಹತ್ವದ ಪರಿಣಾಮ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

















