ಚೆನ್ನೈ: ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ (K Annamalai) ಕರ್ನಾಟಕದಲ್ಲಿ ಚಿರಪರಿಚಿತ ಹೆಸರು. ಕರುನಾಡ ಸಿಂಘಂ ಎಂದೇ ಖ್ಯಾತಿವೆತ್ತ ಕೆ.ಅಣ್ಣಾಮಲೈ ತಮಿಳುನಾಡಿನ ಬಿಜೆಪಿ (BJP) ರಾಜ್ಯಾಧ್ಯಕ್ಷರಾಗಿ ನೇಮಕಗೊಂಡು ತಮಿಳುನಾಡು ರಾಜಕೀಯದಲ್ಲಿ ಸಂಚಲನ ಹುಟ್ಟುಹಾಕಿದ್ದಾರೆ. ಇದೀಗ, ಪಕ್ಷವು ಅವರನ್ನು ಕೊಯಮತ್ತೂರು ಕ್ಷೇತ್ರದಿಂದ ಕಣಕ್ಕಿಳಿಸಿದೆ.
ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಅಣ್ಣಾಮಲೈ 2019 ರಲ್ಲಿ ಸೇವೆಗೆ ರಾಜೀನಾಮೆ ನೀಡಿ 2020 ರಲ್ಲಿ ಬಿಜೆಪಿ ಸೇರಿದರು. ಒಂದು ವರ್ಷದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡು 37 ನೇ ವಯಸ್ಸಿನಲ್ಲಿ ಅತಿ ಕಿರಿಯ ವ್ಯಕ್ತಿ ಎನಿಸಿಕೊಂಡರು. ತಮಿಳುನಾಡಿನಲ್ಲಿ ಇದೇ ಮೊದಲ ಬಾರಿಗೆ ಪ್ರಾದೇಶಿಕ ಪಕ್ಷಗಳಿಗೆ ಸಡ್ಡು ಹೊಡೆಯುವಂತೆ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸುತ್ತಿದ್ದಾರೆ.
39 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ತಮಿಳುನಾಡಿನ ಮೇಲೆ ಬಿಜೆಪಿ ಕಣ್ಣು ನೆಟ್ಟಿದೆ. ಅಣ್ಣಾಮಲೈ ಮೇಲೆ ಪಕ್ಷ ಮತ್ತು ತಮಿಳುನಾಡಿನ ಜನತೆ ಭರವಸೆ ಇಟ್ಟಿದೆ. ಡಿಎಂಕೆ ಮತ್ತು ಎಐಎಡಿಎಂಕೆಯನ್ನು ಮೀರಿ 40% ರಷ್ಟು ಸೆಳೆಯದ ಮತ ಹಂಚಿಕೆ ಇದೆ. ಅನೇಕ ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡರೂ ಮತದಾರರನ್ನು ಸೆಳೆಯಲು ಯಾವ ಪಕ್ಷಕ್ಕೂ ಸಾಧ್ಯವಾಗುತ್ತಿಲ್ಲ. ಈ ಮತಗಳನ್ನು ಸೆಳೆಯಲು ಎಲ್ಲ ಪಕ್ಷಗಳೂ ಶಕ್ತಿ ಮೀರಿ ಪ್ರಯತ್ನಿಸುತ್ತಿವೆ.
ಇದೀಗ ಅಣ್ಣಾಮಲೈ ಕೊಯಮತ್ತೂರಿನಿಂದ ಕಣಕ್ಕಿಳಿದಿದ್ದಕ್ಕೆ ಬಿಜೆಪಿ ಬೆಂಬಲಿಗರು ಹರ್ಷ ವ್ಯಕ್ತಪಡಿಸಿದ್ದಾರೆ.