ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟಿಸ್ ಡಿ. ವೈ ಚಂದ್ರಚೂಡ್ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ಇಲ್ಲಿನ ರಾಷ್ಟ್ರಪತಿ ಭವನದ ಮೆಜೆಸ್ಟಿಕ್ ಲಾನ್ಸ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಿದರು.

ಇವರ ತಂದೆ ವೈ ವಿ ಚಂದ್ರಚೂಡ್ ರವರು ಫೆಬ್ರವರಿ 22, 1978 ರಿಂದ ಜುಲೈ 11, 1985 ರವರೆಗೆ ಸುದೀರ್ಘ ಸೇವೆ ಸಲ್ಲಿಸಿದ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿದ್ದರು.

ನ್ಯಾಯಮೂರ್ತಿ ಚಂದ್ರಚೂಡ್ ರವರು ನವೆಂಬರ್ 10, 2024 ರವರೆಗೆ ಎರಡು ವರ್ಷಗಳ ಕಾಲ ಸಿಜೆಐ ಆಗಿ ಸೇವೆ ಸಲ್ಲಿಸುತ್ತಾರೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರು ತಮ್ಮ 65 ನೇ ವಯಸ್ಸಿನಲ್ಲಿ ನಿವೃತ್ತರಾಗುತ್ತಾರೆ. ಜಸ್ಟಿಸ್ ಉದಯ್ ಉಮೇಶ್ ಲಲಿತ್ ತಮ್ಮ ಉತ್ತರಾಧಿಕಾರಿಯಾಗಿ ಜಸ್ಟಿಸ್ ಚಂದ್ರಚೂಡ್ ರವರನ್ನು ಕೊಲಿಜಿಯಂ ವ್ಯವಸ್ಥೆಯ ಮೂಲಕ ಶಿಫಾರಸು ಮಾಡಿದ್ದಾರೆ.

ನವೆಂಬರ್ 11, 1959 ರಂದು ಜನಿಸಿದ ನ್ಯಾಯಮೂರ್ತಿ ಚಂದ್ರಚೂಡ್ ರವರು ಮೇ 13, 2016 ರಂದು ಸುಪ್ರೀಂ ಕೋರ್ಟ್ ನಾಯಾಧೀಶರಾಗಿ ನೇಮಕರಾಗಿದ್ದರು. ಅವರು ಅಯೋಧ್ಯೆ ಭೂ ವಿವಾದ, ಗೌಪ್ಯತೆ, ವಿವಾಹೇತರ ಸಂಬಂಧ, ಸಲಿಂಗ ಸಂಬಂಧ, ಆಧಾರ್ ಯೋಜನೆಯ ಸಿಂಧುತ್ವ ಮತ್ತು ಶಬರಿಮಲೆ ತೀರ್ಪನ್ನು ನೀಡಿರುವ ಪೀಠಗಳ ಭಾಗವಾಗಿ ಹಲವಾರು ಮಹತ್ವದ ತೀರ್ಪುಗಳನ್ನು ನೀಡುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದಾರೆ.

ಇತ್ತೀಚೆಗೆ, ಅವರ ನೇತೃತ್ವದ ಪೀಠವು ಗರ್ಭಾವಸ್ಥೆಯ ವೈದ್ಯಕೀಯ ಮುಕ್ತಾಯ ಕಾಯಿದೆಯ ವ್ಯಾಪ್ತಿಯನ್ನು ಮತ್ತು 20-24 ವಾರಗಳ ಗರ್ಭಪಾತಕ್ಕೆ ಅವಿವಾಹಿತ ಮಹಿಳೆಯರನ್ನು ಸೇರಿಸಲು ಅನುಗುಣವಾದ ನಿಯಮಗಳನ್ನು ವಿಸ್ತರಿಸಿದೆ.