ಆರನೆಯ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ: ತುಳುನಾಡಿನ ಪರಂಪರೆ ಬಿಂಬಿಸುವ ಮಾಹೆಯ ಯಕ್ಷಗಾನ ಕಿರುಚಿತ್ರಕ್ಕೆ ತೀರ್ಪುಗಾರರ ಪ್ರಶಸ್ತಿಯ ಗರಿ

ಮಣಿಪಾಲ: ಮಾಹೆಯ ಅಂತರ್‌ ಸಾಂಸ್ಕೃತಿಕ ಅಧ್ಯಯನ ಮತ್ತು ಸಂವಾದ ಕೇಂದ್ರವು ತುಳು ಕರಾವಳಿಯ ಸಂಸ್ಕೃತಿ
ಅಧ್ಯಯನ,ಸಂಶೋಧನೆ ಮತ್ತು ದಾಖಲೀಕರಣದ ವಿಭಾಗಗಳಲ್ಲಿ ಮಹತ್ತ್ವದ ಕೆಲಸಗಳನ್ನು ಮಾಡುತ್ತಿದ್ದು, ಇದರ ‘ಯಕ್ಷಗಾನ’ ಸಾಕ್ಷ್ಯಚಿತ್ರವು ವಾರಾಣಸಿಯಲ್ಲಿ ಡಿಸೆಂಬರ್‌ 1 ರಿಂದ 3 ರವರೆಗೆ ಜರಗಿದ ಸಾಂಸ್ಕೃತಿಕ ಪ್ರವಾಸೋದ್ಯಮದ ಕುರಿತ ಪ್ರತಿಷ್ಠಿತ ಆರನೆಯ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ‘ತೀರ್ಪುಗಾರರ ಪ್ರಶಸ್ತಿ’ಗೆ ಭಾಜನವಾಗಿದೆ.

ಈ ಚಿತ್ರೋತ್ಸವದಲ್ಲಿ 44 ದೇಶಗಳ 94 ಕಿರುಚಿತ್ರಗಳು ಭಾಗವಹಿಸಿದ್ದು ಕರಾವಳಿಯ ಶ್ರೀಮಂತ ಕಲಾಪರಂಪರೆಯನ್ನು ಪ್ರತಿನಿಧಿಸುವ ‘ಯಕ್ಷಗಾನ’ ಕಿರುಚಿತ್ರವು ಎಲ್ಲ ಕಿರುಚಿತ್ರಗಳನ್ನು ಹಿಂದಿಕ್ಕಿ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.  
                 
‘ಯಕ್ಷಗಾನ’ ಕಿರುಚಿತ್ರವನ್ನು ಸಿಐಎಸ್‌ಡಿಯ ‘ತುಳುನಾಡಿನ ಸಜೀವ ಸಂಸ್ಕೃತಿಗಳ ಮೂಲಕ ಭಾರತದ ಸೂಕ್ಷ್ಮ ಅರಿವು’ ಯೋಜನೆಯಲ್ಲಿ ಸಿದ್ಧಗೊಳಿಸಲಾಗಿದೆ. ಈ ಯೋಜನೆಯ ಮೂಲಕ ಕರ್ನಾಟಕದ ಕರಾವಳಿ ಜಿಲ್ಲೆಗಳ ಮತ್ತು ಕೇರಳದ ಕಾಸರಗೋಡಿನ ಸಂಸ್ಕೃತಿ-ಪರಂಪರೆಗಳ ಕುರಿತು ಅಧ್ಯಯನ, ಸಂಶೋಧನೆ ಮತ್ತು ದಾಖಲೀಕರಣವನ್ನು ನಡೆಸುತ್ತಿದೆ. ಭಾರತೀಯ ಪುರಾಣಗಳನ್ನು ಸಂಭಾಷಣೆ -ಅಭಿನಯ-ಸಂಗೀತ- ನ್ರತ್ಯ – ವೇಷಭೂಷಣದ ಮೂಲಕ ಪ್ರಸ್ತುತಿಪಡಿಸುವ ಅತ್ಯಂತ ಜನಪ್ರಿಯ ಕಲೆ ಯಕ್ಷಗಾನದ ಕುರಿತು ಈ ಕಿರುಚಿತ್ರ ಸಿದ್ಧಗೊಂಡಿರುವುದು ಗಮನಾರ್ಹವಾಗಿದೆ.  

ಸಾಂಸ್ಕೃತಿಕ ಪ್ರವಾಸೋದ್ಯಮದ ಕುರಿತ ಆರನೆಯ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಲಭಿಸಿರುವ ತೀರ್ಪುಗಾರರ ಪ್ರಶಸ್ತಿ (ಜೂರಿ ಅವಾರ್ಡ್‌) ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಮತ್ತು ಪ್ರಸರಣವನ್ನು ಉತ್ತೇಜಿಸುವಲ್ಲಿ ಸಿಐಎಸ್‌ಡಿಯ ಬದ್ಧತೆಗೆ ದೊರೆತ ಮನ್ನಣೆಯಾಗಿದೆ. ಈ ಕಿರುಚಿತ್ರದ ಯಶಸ್ಸು ಭಾರತದ ಪ್ರಾದೇಶಿಕ ಕಲೆಗಳು ಹೊಂದಿರುವ ಜಾಗತಿಕ ಮಟ್ಟದ ಪ್ರಾಮುಖ್ಯವನ್ನು ಎತ್ತಿ ಹಿಡಿಯುತ್ತದೆ. 

ಇದರ ಜೊತೆಗೆ, ‘ಡಿಸರ್ನಿಂಗ್‌ ಇಂಡಿಯ: ‘ಯಕ್ಷಗಾನ’ ಕಿರುಚಿತ್ರವು ತ್ರಿಶೂರ್‌ ಅಂತಾರಾಷ್ಟ್ರೀಯ ಚಿತ್ರೋತ್ಸವ
ಆಯೋಜಿಸುವ  7 ನೆಯ ಅಂತಾರಾಷ್ಟ್ರೀಯ ಜಾನಪದ ಚಿತ್ರೋತ್ಸವಕ್ಕೂ ಆಯ್ಕೆಯಾಗಿದೆ. 2023ರ
ಎಪ್ರಿಲ್‌ನಲ್ಲಿ ಹೈದರಾಬಾದ್‌ನಲ್ಲಿ ಜರಗಿದ ಸಿಇಸಿ-ಯುಜಿಸಿಯ ರಾಷ್ಟ್ರಮಟ್ಟದ ಶೈಕ್ಷಣಿಕ ಚಿತ್ರೋತ್ಸವ ಸ್ಪರ್ಧೆಯಲ್ಲಿಯೂ
ಸಿಐಎಸ್‌ಡಿಯ ‘ಯಕ್ಷಗಾನ’ದ ಪಠ್ಯಕ್ಕೆ ಅತ್ಯುತ್ತಮ ಚಿತ್ರಕತೆ ಬಹುಮಾನ ಲಭಿಸಿರುವುದು ಉಲ್ಲೇಖನೀಯ. 
           
ಮಾಹೆಯ ಅಂತರ್‌ ಸಾಂಸ್ಕೃತಿಕ ಅಧ್ಯಯನ ಮತ್ತು ಸಂವಾದ ಕೇಂದ್ರವು ಸಿದ್ಧಪಡಿಸಿದ ‘ಯಕ್ಷಗಾನ’ ಕಿರುಚಿತ್ರಕ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರರ ಪ್ರಶಸ್ತಿ ಲಭಿಸಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಮಾಹೆಯ ಉಪಕುಲಪತಿಗಳಾದ ಲೆ. ಜ. ಡಾ. ಎಂ. ಡಿ. ವೆಂಕಟೇಶ್‌, ಸಂಸ್ಥೆಯು ಸ್ಥಳೀಯ ಸಂಸ್ಕೃತಿಯ ಅಧ್ಯಯನಕ್ಕೆ ಆದ್ಯತೆ ನೀಡುತ್ತಿದೆ.  ಪ್ರಾದೇಶಿಕತೆಯ ಗವಾಕ್ಷಿಯ ಮೂಲಕ ಸಮಗ್ರ ಭಾರತೀಯ ಸಂಸ್ಕೃತಿಯ ದರ್ಶನ ಮಾಡಿಸುವಲ್ಲಿ ಅರ್ಥಪೂರ್ಣ ಹೆಜ್ಜೆಗಳನ್ನಿರಿಸುತ್ತಿದೆ. ‘ಯಕ್ಷಗಾನ’ ಕಿರುಚಿತ್ರವು ಪ್ರಾದೇಶಿಕ ಕಲೆಯೊಂದರ ವೈಶಿಷ್ಟ್ಯವನ್ನು ಸಾರಿ ಹೇಳುವುದಷ್ಟೇ ಅಲ್ಲ, ಪ್ರಾದೇಶಿಕ ಕಲೆಗಳು ಜಾಗತಿಕ ಮಟ್ಟದಲ್ಲಿಯೂ  ಮಹತ್ತ್ವವನ್ನು ಹೊಂದಿರುವುದನ್ನು ಎತ್ತಿಹಿಡಿಯುತ್ತದೆ. ಸಾಂಸ್ಕೃತಿಕ- ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಾಯೋಗಿಕ ಪ್ರಯತ್ನಗಳ ಮೂಲಕ ಮಾಹೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಜ್ಞಾನ ಪರಂಪರೆಯ ಅರಿವು ಮೂಡಿಸುವುದಕ್ಕೆ ಬದ್ಧವಾಗಿದೆ  ಎಂದು
ಹೇಳಿದರು.

ಮಾಹೆಯ ಆಡಳಿತ ಶಾಸ್ತ್ರ, ಕಾನೂನು, ಮಾನವಿಕ ಮತ್ತು ಸಮಾಜವಿಜ್ಞಾನ ವಿಭಾಗದ ಸಹಉಪಕುಲಪತಿಗಳಾದ ಪ್ರೊ. ಡಾ ಮಧು ವೀರರಾಘವನ್‌ ಈ ಪ್ರಶಸ್ತಿಯು ಸಿಐಎಸ್‌ಡಿ ತಂಡದ ಪರಿಶ್ರಮಕ್ಕೆ ದೊರೆತ ಮನ್ನಣೆಯಾಗಿದೆ. ಜೊತೆಗೆ, ತುಳುನಾಡಿನ
ಸಾಂಸ್ಕೃತಿಕ ಶ್ರೀಮಂತಿಕೆಗೆ ದೊರೆತ ಗೌರವವೂ ಹೌದು. ಭಾರತದ ಪರಂಪರೆಯ ಬಹುತ್ವವನ್ನು ಪ್ರತಿನಿಧಿಸುವ ಸ್ಥಳೀಯ
ಸಂಸ್ಕೃತಿಗಳ ಅಧ್ಯಯನ, ಸಂಶೋಧನೆ ಮತ್ತು ದಾಖಲೀಕರಣಗಳಂಥ ಕೆಲಸಗಳನ್ನು ಮುಂದುವರಿಸಲು ಈ ಪ್ರಶಸ್ತಿಯಿಂದ
ಉತ್ತೇಜನ ದೊರೆತಂತಾಗಿದೆ ಎಂದು ಅಭಿಪ್ರಾಯ ಪಟ್ಟರು.

ಅಂತರ್‌ ಸಾಂಸ್ಕೃತಿಕ ಸಂವಾದ ಮತ್ತು ತಿಳಿವಳಿಕೆಯನ್ನು ಉತ್ತೇಜಿಸುವ ಸಿಐಎಸ್‌ಡಿ ಯು ಮಾಹೆಯ ಮಣಿಪಾಲ್‌ ಐರೋಪ್ಯ
ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಶಸ್ತಿ ಪುರಸ್ಕೃತ ‘ಯಕ್ಷಗಾನ‘ ಕಿರುಚಿತ್ರವು ಸ್ಥಳೀಯ
ಜ್ಞಾನಪರಂಪರೆಯನ್ನು ಸಂರಕ್ಷಿಸುವ ಮತ್ತು ತುಳುನಾಡಿನ ಅನನ್ಯ ಪರಂಪರೆಗಳ ಬಗ್ಗೆ ಜಾಗತಿಕವಾಗಿ ಅರಿವು ಮೂಡಿಸುವ ಆರಂಭಿಕ ಪ್ರಯತ್ನದ ಭಾಗವಾಗಿ ಸಿದ್ಧಗೊಂಡಿದೆ.