ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ  ಸಂಘ ಜೂ.26: ನೂತನ ಕಟ್ಟಡ  ‘ಕದಿರು’ ಉದ್ಘಾಟನೆ

ಸಿದ್ದಾಪುರ: ಶತಮಾನೋತ್ಸವ ಸಂಭ್ರಮಾಚರಣೆಯ ಸಮೀಪದಲ್ಲಿರುವ ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘವು ಸ್ವಂತ ಬಂಡವಾಳದಿಂದ ಸುಮಾರು 2 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡ ಕದಿರು ಜೂ.26ರ ಬುಧವಾರ ಬೆಳಗ್ಗೆ 10.30ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ  ಎ. ಜಯರಾಮ  ಭಂಡಾರಿ ಅವರು ಹೇಳಿದರು.
ಅವರು ಸಿದ್ದಾಪುರದಲ್ಲಿರುವ ಸಂಘದ ಕೇಂದ್ರ ಕಚೇರಿಯಲ್ಲಿ ನೂತನ ಕಟ್ಟಡ ಉದ್ಘಾಟನ ಕಾರ್ಯಕ್ರಮದ ಅಂಗವಾಗಿ ಜೂ.23ರಂದು ನಡೆಸಿದಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದರು. 26ರಂದು ಬೆಳಿಗ್ಗೆ 10.30 ಕ್ಕೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.  ಅಧ್ಯಕ್ಷತೆಯನ್ನು ಜಯರಾಮ ಭಂಡಾರಿ, ಅಧ್ಯಕ್ಷರು ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಸಿದ್ದಾಪುರ ಇವರು ವಹಿಸಲಿದ್ದಾರೆ.
ನೂತನ ಕಟ್ಟಡದ ಉದ್ಘಾಟನೆಯನ್ನು  ಡಾ| ಎಂ ಎನ್ ರಾಜೇಂದ್ರ ಕುಮಾರ್, ಅಧ್ಯಕ್ಷರು,ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮಂಗಳೂರು ಇವರು ನೆರವೇರಿಸಲಿದ್ದಾರೆ. ಬ್ಯಾಂಕಿಂಗ್ ವಿಭಾಗದ ಉದ್ಘಾಟನೆಯನ್ನು ಕೋಟ ಶ್ರೀನಿವಾಸ ಪೂಜಾರಿ ವಿರೋಧ ಪಕ್ಷದ ನಾಯಕರು, ವಿಧಾನ ಪರಿಷತ್, ಇವರು ನಡೆಸಲಿದ್ದಾರೆ.
ಭದ್ರತಾ ಕೊಠಡಿಯ ಉದ್ಘಾಟನೆಯನ್ನು ಭಾಸ್ಕರ್ ರಾವ್ ಐಪಿಎಸ್, ಹೆಚ್ಚುವರಿ ಪೊಲೀಸ್, ಮಹಾ ನಿರ್ದೇಶಕರು, ಇವರು ನಡೆಸಲಿದ್ದು, ಭದ್ರತಾ ಕೋಶದ ಉದ್ಘಾಟನೆಯನ್ನು ಬಿ ವೈ ರಾಘವೇಂದ್ರ ಲೋಕಸಭಾ ಸದಸ್ಯರು ಶಿವಮೊಗ್ಗ ಕ್ಷೇತ್ರ,
ಸಭಾಭವನ ಉದ್ಘಾಟನೆಯನ್ನು ಬಿ. ಎಂ. ಸುಕುಮಾರ್ ಶೆಟ್ಟಿ, ಶಾಸಕರು, ಬೈಂದೂರು  ವಿಧಾನಸಭಾ  ಕ್ಷೇತ್ರ, ಸೇಫ್ ಲಾಕರ್ ಉದ್ಘಾಟನೆಯನ್ನು ಕೆ.ಎಂ.ಆಶಾ, ಸಹಕಾರ ಸಂಘಗಳ  ಅಪರ ನಿಬಂಧಕರು,  ಕೇಂದ್ರ ಕಚೇರಿ, ಬೆಂಗಳೂರು, ಗೋದಾಮು ಉದ್ಘಾಟನೆಯನ್ನು ಕೊಡವೂರು ರವಿರಾಜ ಹೆಗ್ಡೆ, ಅಧ್ಯಕ್ಷರು ದಕ್ಷಿಣ ಕನ್ನಡ ಸಹಕಾರಿ  ಹಾಲು ಉತ್ಪಾದಕರ ಒಕ್ಕೂಟ, ಮಂಗಳೂರು, ಆಡಳಿತ ಮಂಡಳಿಯ ಸಭಾಂಗಣ ಉದ್ಘಾಟನೆಯನ್ನು ಬೋಜೇಗೌಡ ವಿಧಾನಪರಿಷತ್  ಸದಸ್ಯರು, ಕರ್ನಾಟಕ ಸರ್ಕಾರ ಇವರು ನೆರವೇರಿಸಲಿದ್ದಾರೆ ಎಂದರು.
ಸಂಜೆ 6ಗಂಟೆಗೆ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ‘ಅಭಿಮನ್ಯು ಕಾಳಗ’ ಮತ್ತು ‘ಗದಾಯುದ್ಧ’ ಯಕ್ಷಗಾನ ವೈಭವ ನಡೆಯಲಿದೆ.
ನಿರ್ದೇಶಕರ ಹಾಗೂ ಸದಸ್ಯರ ಸಹಕಾರದೊಂದಿಗೆ ಎರಡು ಅಂತಸ್ತುಗಳ ನೂತನ ಕಟ್ಟಡ ನಿರ್ಮಾಣಗೊಂಡಿದೆ. ಕಟ್ಟಡದ ಕೆಳ ಅಂತಸ್ತಿನಲ್ಲಿ ಗೋದಾಮು,  ಸಾರ್ವಜನಿಕರಿಗೆ  ಪಡಿತರ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಥಮ ಮಹಡಿಯಲ್ಲಿ ಆಡಳಿತ ಕಚೇರಿ, ಆಡಳಿತಾಧಿಕಾರಿ ಕೊಠಡಿ, ಶಾಖಾಧಿಕಾರಿ ಕೊಠಡಿ, ಸಮಾಲೋಚನಾಕೊಠಡಿ, ನಿರ್ದೇಶಕರ ಮೀಟಿಂಗ್‌ ಹಾಲ್ ವ್ಯವಸ್ಥೆಗೊಳಿಸಲಾಗಿದೆ. ವ್ಯವಹಾರದ  ಕಚೇರಿ  ಸಂಪೂರ್ಣ ಹವಾ ನಿಯಂತ್ರಣ ಗೊಂಡಿದೆ. ಎರಡನೇ ಮಹಡಿಯಲ್ಲಿ ಸುಮಾರು 500  ಮಂದಿ ಕುಳಿತುಕೊಳ್ಳ ಬಹುದಾದ ಸಭಾಂಗಣ ಹಾಗೂ ಅದಕ್ಕೆ ತಾಗಿಕೊಂಡೇ ಸುಮಾರು  100 ಮಂದಿ ಕುಳಿತುಕೊಳ್ಳಬಹುದಾದ ಮಿನಿ ಹಾಲ್ನಿರ್ಮಿಸಲಾಗಿದೆ ಎಂದರು.
ಸಂಘವು ಸಂಪೂರ್ಣ ಗಣಕೀಕೃತ ವಾಗಿದ್ದು , ಲಾಕರ್‌ ಸೌಲಭ್ಯ ಹೊಂದಿದೆ. ಸದಸ್ಯರ  ಅನುಕೂಲಕ್ಕಾಗಿ ಪ್ರಥಮ ಹಂತದಲ್ಲಿ 120 ಲಾಕರ್‌ ಸೌಲಭ್ಯ ಕಲ್ಪಿಸಲಾಗಿದೆ. ಲಿಫ್ಟ್‌ ಸೌಲಭ್ಯ ಹೊಂದಿದೆ. ಸಂಘವು ಸಿದ್ದಾಪುರ, ಹೊಸಂಗಡಿ ಗ್ರಾಮಗಳನ್ನು ಒಳಗೊಂಡ  ಸಂಘವಾಗಿದೆ. ಸಿದ್ದಾಪುರದಲ್ಲಿ ಕೇಂದ್ರ ಕಚೇರಿ ಹೊಂದಿದ್ದರೆ, ಹೊಸಂಗಡಿಯಲ್ಲಿ ಶಾಖಾ  ಕಚೇರಿ  ಹೊಂದಿದೆ. ಸಂಘದ ಈ ನೂತನ ಕಟ್ಟಡ  ನಿರ್ಮಾಣಕ್ಕಾಗಿ ಸದಸ್ಯರು  ತಮ್ಮ 3  ವರ್ಷದ ಡಿವಿಡೆಂಡ್‌ ಮೊತ್ತವನ್ನು ನೀಡಿದ್ದಾರೆ ಎಂದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್‌ ಗಾಣಿಗ ಮಾತನಾಡಿ ಉದ್ಘಾಟನ ಸಮಾರಂಭದಲ್ಲಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಜಯರಾಮ ಗಾಣಿಗ, ನಿರ್ದೇಶಕರಾದ ಡಿ. ಗೋಪಾಲಕೃಷ್ಣ ಕಾಮತ್‌, ಚಂದ್ರ ಪ್ರಕಾಶ ಶೆಟ್ಟಿ, ಕೆ. ಸತೀಶ್‌ ಕುಮಾರ್‌ ಶೆಟ್ಟಿ ಕಡ್ರಿ, ಬಿ. ಆನಂದ ಶೆಟ್ಟಿ ಭಾಗೀಮನೆ, ಎಸ್‌. ಕೆ. ವಾಸುದೇವ ಪೈ, ಶಂಕರ ಶೆಟ್ಟಿ ನಳಾಲು, ರಾಘವ ನಾಯ್ಕ, ರೇವತಿ ಶೆಟ್ಟಿ, ರತ್ನಾ ಶೆಟ್ಟಿ ಉಪಸ್ಥಿತರಿದ್ದರು.