ಜೂನ್ 1: ಉಡುಪಿ, ದ.ಕ. ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಪುನಾರಂಭ: ಶೇ.15ರಷ್ಟು ಬಸ್ ದರ ಹೆಚ್ಚಳ

ಉಡುಪಿ: ಕೊರೊನಾ ಲಾಕ್ ಡೌನ್ ನಿಂದಾಗಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಗಳ ಸಂಚಾರ ಜೂನ್ 1ರಿಂದ ಮತ್ತೆ ಪುನಾರಂಭವಾಗಲಿದೆ.
ಇಂದು ಉಡುಪಿ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೆನರಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಮಾಹಿತಿ ನೀಡಿದರು.
ಸರ್ಕಾರದ ಆದೇಶದಂತೆ ಸದ್ಯ ಬೆಳಿಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ಬಸ್ ಸಂಚಾರ ಇರಲಿದೆ. ಸರ್ಕಾರದ ಎಲ್ಲ ಆದೇಶಗಳನ್ನು ಪಾಲಿಸಿಕೊಂಡು ಬಸ್ ಓಡಿಸಲಾಗುತ್ತದೆ ಎಂದು ತಿಳಿಸಿದರು.
ಉಭಯ ಜಿಲ್ಲೆಗಳಲ್ಲಿ ಸುಮಾರು 2 ಸಾವಿರ ಸರ್ವಿಸ್ ಬಸ್ ಗಳ ಪೈಕಿ ಮೊದಲ ಹಂತವಾಗಿ ಶೇ. 25 ಬಸ್ ಗಳು ಓಡಾಟ ನಡೆಸಲಿದ್ದು, ಮುಂದಿನ ವಾರದೊಳಗೆ ಎಲ್ಲ ಬಸ್ ಗಳು ರಸ್ತೆಗಿಳಿಯಲಿವೆ. ದ.ಕ. ಜಿಲ್ಲೆಯ 320 ಸಿಟಿ ಬಸ್ ಗಳ ಪೈಕಿ 135 ಹಾಗೂ ಉಡುಪಿ ನಗರದ 85 ಬಸ್ ಗಳ ಪೈಕಿ 22 ಬಸ್ ಗಳು ಸಂಚಾರ ಆರಂಭಿಸಲಿವೆ ಎಂದು ಮಾಹಿತಿ ನೀಡಿದರು.
ಶೇ.15ರಷ್ಟು ಬಸ್ ದರ ಹೆಚ್ಚಳ:
ನಷ್ಟವನ್ನು ಸರಿದೂಗಿಸುವ ನಿಟ್ಟಿನಿಂದ ಸರ್ಕಾರದ ಜತೆಗೆ ನಡೆಸಿರುವ ಮಾತುಕತೆಯಂತೆ ಶೇ. 15 ರಷ್ಟು ಬಸ್ ದರಗಳನ್ನು ಹೆಚ್ಚಿಸಲಾಗಿದೆ. ಅದರಂತೆ
ಮಣಿಪಾಲ-ಉಡುಪಿ-ಮಂಗಳೂರಿಗೆ 85 ರೂ.(ಹಿಂದಿನ ದರ 68ರೂ.), ಉಡುಪಿ- ಮಂಗಳೂರು 80 ರೂ.(67ರೂ.), ಕಾರ್ಕಳ- ಪಡುಬಿದ್ರೆ-ಮಂಗಳೂರು 65 ರೂ.(55 ರೂ.), ಕುಂದಾಪುರ- ಉಡುಪಿ-ಮಂಗಳೂರು 120ರೂ.(100 ರೂ.), ಕುಂದಾಪುರ- ಉಡುಪಿ 55ರೂ.(45), ಕಾರ್ಕಳ- ಮೂಡಬಿದ್ರೆ- ಮಂಗಳೂರು 62 ರೂ.(52 ರೂ.), ಉಡುಪಿ-ಹಿರಿಯಡ್ಕ-ಕಾರ್ಕಳ 45 ರೂ.(40 ರೂ.) ನಿಗದಿ ಪಡಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ನಾಯಕ್ ಕುಯಿಲಾಡಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸದಾನಂದ ಛಾತ್ರ, ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ರಾಜ್ ಆಳ್ವ ಇದ್ದರು.