ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಸಿಪಿಐಎಂ ಪ್ರತಿಭಟನೆ

ಉಡುಪಿ: ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಅಜ್ಜರಕಾಡು ಹುತಾತ್ಮ ಸೈನಿಕರ ಸ್ಮಾರಕ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಐಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಭಜಿಸಿ ಕೇಂದ್ರದ ಆಡಳಿತಕ್ಕೆ ಒಳಪಡಿಸಿದ ಕೇಂದ್ರ ಸರ್ಕಾರದ ನೀತಿಯು ಸಂವಿಧಾನ ಮತ್ತು ಪ್ರಜಾಪ್ರಭುತ್ವ ತತ್ವಗಳಿಗೆ ಮಾರಕವಾಗಿದೆ. ರಾಜ್ಯಪಾಲರ ಆಡಳಿತ ಇರುವ ಸಂದರ್ಭದಲ್ಲಿ ಸೈನ್ಯವನ್ನು ನಿಯೋಜಿಸಿ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಿ, ಜನರನ್ನು ಚಲಿಸಿದಂತೆ ಮಾಡಿದ ಸರ್ಕಾರದ ಕ್ರಮ ಅತ್ಯಂತ ಅಪಾಯಕಾರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಐಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಎಚ್‌. ನರಸಿಂಹ ಮಾತನಾಡಿ,  ಕೇಂದ್ರ ಸರ್ಕಾರದ ಜನ ವಿರೋಧಿ, ಸಂವಿಧಾನ ವಿರೋಧಿ ನೀತಿಗಳಿಂದ ಜನರು ತತ್ತರಿಸುತ್ತಿದ್ದಾರೆ. ನೋಟು ಬ್ಯಾನ್‌ ನಂತರ ದೇಶದ ಆರ್ಥಿಕತೆ ಸಂಪೂರ್ಣ ಕುಸಿದಿದೆ. ಬಿಜೆಪಿ ದೇಶದಾದ್ಯಂತ ಹರಾಜಕತೆ ಸೃಷ್ಟಿಸಿ, ವಿದೇಶಿ ಬಂಡವಾಳಗಾರರಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದರು.

ಸಿಪಿಐಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್‌ ಕಲ್ಲಾಗರ್‌ ಮಾತನಾಡಿ, ಇಂದಿರಾ ಗಾಂಧಿಯವರು  ತುರ್ತುಪರಿಸ್ಥಿತಿ ಹೇರುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದರು. ಅದೇ ಹಾದಿಯಲ್ಲಿ ಬಿಜೆಪಿ ಸಹ
ಸಾಗುತ್ತಿದೆ ಎಂದರು. ಸಿಪಿಐಎಂ ಉಡುಪಿ ತಾಲ್ಲೂಕು ಕಾರ್ಯದರ್ಶಿ ಶಶಿಧರ್‌ ಗೊಲ್ಲ, ಉಮೇಶ್‌ ಕುಂದರ್‌, ಕವಿರಾಜ್‌, ಕೆ. ಲಕ್ಷ್ಮಣ, ನಳಿನಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.